ನಿಯಮ ಉಲ್ಲಂಘಿಸಿ ಕೀಟನಾಶಕ ಉತ್ಪಾದನೆ

030303
Published on

ತುಮಕೂರು: ನಗರದ ಹೊರವಲಯದ ಹಿರೇಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಶಾರದ ಆಗ್ರೋಟೆಕ್​ ಕೀಟನಾಶಕ ಉತ್ಪಾದನಾ ಘಟಕದ ಗೋದಾಮಿನಲ್ಲಿ ನಿಯಮ ಉಲ್ಲಂಘಿಸಿ ಲೇಬಲ್​ ನಮೂದಿಸಿದ ಮ್ಯಾಂಕೊಜೆಟ್​- 75% ಡಬ್ಲ್ಯೂ.ಪಿ. ಮತ್ತು ಮೆಲಾಥಿಯಾನ್​-5% ಡಿ.ಪಿ. ಸೇರಿ 4353 ಕೆ.ಜಿ. ಕೀಟನಾಶಕವನ್ನು ಕೃಷಿ ಇಲಾಖೆ ಜಪ್ತಿ ಮಾಡಿದೆ.

ಸೀಬೆ, ಜೋಳ ಮತ್ತು ಮಾವು ಬೆಳೆಗಳಿಗೆ ಮ್ಯಾಂಕೊಜೆಟ್​-75% ಡಬ್ಲ್ಯೂ.ಪಿ. ಮತ್ತು ಮೆಲಾಥಿಯಾನ್​-5% ಡಿ.ಪಿ. ಕೀಟನಾಶಕವನ್ನು ನಿಷೇಧ ಮಾಡಿದ್ದರೂ ಸಹ ಕೀಟನಾಶಕಗಳನ್ನು ಉತ್ಪಾದಿಸಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದ್ದ 3.22 ಲಕ್ಷ ರೂ. ಮೌಲ್ಯದ ಕೀಟನಾಶಕವನ್ನು ಪಂಚರ ಸಮಕ್ಷಮದಲ್ಲಿ ಮಹಜರ್​ ಮೂಲಕ ಜಪ್ತಿ ಮಾಡಲಾಗಿದೆ.

ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಕೀಟನಾಶಕ ಮಾರಾಟ ತಡೆ ಆದೇಶ ಜಾರಿ ಮಾಡಿ ಸಮಜಾಯಿಷಿ ನೀಡಲು ನೋಟೀಸ್​ ಮೂಲಕ ತಿಳುವಳಿಕೆ ಪತ್ರ ಜಾರಿ ಮಾಡಲಾಗಿತ್ತು. ಕೀಟನಾಶಕಗಳ ಉತ್ಪಾದಕ ಕಂಪನಿಯು ಸೂಕ್ತ ದಾಖಲಾತಿಗಳ ನಿರ್ವಹಣೆ, ಇಲಾಖೆ ಅನುಮತಿ ಇಲ್ಲದೆ, ಸಮಜಾಯಿಷಿ ನೀಡದಿರುವ ಕಾರಣ ಕೀಟನಾಶಕ ಕಾಯ್ದೆ 1968 & ಕೀಟನಾಶಕ ನಿಯಮಗಳು 1971ರ ಉಲ್ಲಂಘನೆ ಮೇರೆಗೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ದಾಳಿಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಟಿ,ಎನ್​.ಅಶೋಕ್​, ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-1) ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-2) ಅಶ್ವತ್ಥನಾರಾಯಣ ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net