

ತುಮಕೂರು: ಇಸ್ರೋ ಮಾಜಿ ಅಧ್ಯಕ್ಷರಾದ ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆದು ಬೇರೊಂದು ಶಿಕ್ಷಣ ನೀತಿ ರೂಪಿಸುತ್ತಿರುವ ರಾಜ್ಯದ ಕಾಂಗ್ರೆಸ್ ಧೋರಣೆ ಅಭಿವೃದ್ಧಿಗೆ ಮಾರಕ ಎಂದು ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ಖಂಡಿಸಿದ್ದಾರೆ.
ಮೆಕಾಲೆ ಶಿಕ್ಷಣ ಪದ್ಧತಿ ಬದಲಾಗಿ ಕೌಶಲಯುತ ಶಿಕ್ಷಣ ಪದ್ಧತಿ ಅವಶ್ಯಕತೆಗೆ ಅನುಗುಣವಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಜಾರಿಗೆ ತಂದಂತಹ ಶಿಕ್ಷಣ ನೀತಿ ಎಂಬ ಕಾರಣಕ್ಕೆ ವಿರೋಧಿಸುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ದೇಶದಲ್ಲಿ ಈವರೆಗೆ ಎರಡು ಬಾರಿ ಶಿಕ್ಷಣ ನೀತಿ ರೂಪಿಸಿಕೊಂಡಿದ್ದು. ಆ ಎರಡು ಶಿಕ್ಷಣ ನೀತಿಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಯಾವುದೇ ರಾಜ್ಯ ಸರ್ಕಾರಗಳು, ವಿರೋಧ ಪಕ್ಷಗಳು, ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಭಾರತದ ಸ್ವಾತಂತ್ರ್ಯದ ನಂತರ ಮೆಕಾಲೆ ಶಿಕ್ಷಣದ ವಿರುದ್ಧ ನಮ್ಮದೇಶದ ಶಿಕ್ಷಣ ನೀತಿ ಜಾರಿ ಮಾಡಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧ ಮಾಡುವ ಮೂಲಕ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ರಾಜಕಾರಣಿಗಳ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳು ಐಸಿಎಸ್‌ಸಿ ಮತ್ತು ಸಿಬಿಎಸ್‌ಸಿ ಪಠ್ಯಕ್ರಮವಿದ್ದು, ಸರ್ಕಾರಿ ಶಾಲೆ, ಕಾಲೇಜು, ವಿವಿಗಳಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಮಾಡುವ ಮೂಲಕ ಬಡ ವಿದ್ಯಾರ್ಥಿಗಳನ್ನು ಗುಣಮಟ್ಟದ ಕೌಶಲ್ಯಯುತ ಶಿಕ್ಷಣದಿಂದ ಹೊರಗಿಡುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಆಳುವ ಸರ್ಕಾರಕ್ಕೆ ರಾಜಕೀಯವೇ ಪ್ರಾಮುಖ್ಯತೆಯಾದರೆ ಮುಂದಿನ ದಿನಗಳಲ್ಲಿ ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ಅಧ್ಯಾಪಕರು, ವಿದ್ಯಾರ್ಥಿ ನಾಯಕರ ದುಂಡುಮೇಜಿನ ಸಭೆ, ವಿಚಾರಗೋಷ್ಠಿಗಳನ್ನು ನಡೆಸುವ ಮೂಲಕ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಎನ್‌ಇಪಿ ಮಹತ್ವ ತಿಳಿಸಲು ಜನಾಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.