

ತುಮಕೂರು: ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ನಮಗೆಲ್ಲರಿಗೂ ಹೇಗೆ ಪರ್ವ ದಿನವೋ ಹಾಗೆಯೇ ರಾಮ ಮಂದಿರದ ಜನ್ಮಭೂಮಿಯ ವಿಮೋಚನೆ, ರಾಮಮಂದಿರ ನಿರ್ಮಾಣ ಹಾಗೂ ರಾಮದೇವರ ಪುನರ್ ಪ್ರತಿಷ್ಟಾಪನೆ ಇತಿಹಾಸದಲ್ಲಿ ದಾಖಲಾಗಬೇಕಾದ ದಿನ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೈಹಿಕ ಹೋರಾಟ ಹಾಗೂ ಸಂವಿಧಾನ ಬದ್ಧವಾಗಿ ನಮ್ಮ ಸರ್ವೋಚ್ಚ ನ್ಯಾಯಾಲಯ ನಮಗೆ ರಾಮಮಂದಿರ ನಿರ್ಮಾಣದ ಅವಕಾಶವನ್ನ ಒದಗಿಸಿಕೊಟ್ಟಿದೆ ಎಂದರು.
ರಾಮಮಂದಿರ ನಿರ್ಮಾಣದ ಸುಂದರ ಕ್ಷಣ ಇತಿಹಾಸದಲ್ಲಿ ದಾಖಲಾಗುವುದು ಮಾತ್ರವಲ್ಲ,ಪಠ್ಯ ಪುಸ್ತಕಗಳಲ್ಲಿಯೂ ಕೂಡ ಮುದ್ರಿತಗೊಂಡು, ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದರು.
ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿಯವರ ಚುನಾವಣಾ ಗಿಮಿಕ್ ಎಂದು ವಿರೋಧ ಪಕ್ಷಗಳು ಮಾಡುವ ಟೀಕೆ ಅರ್ಥಹೀನ, 500 ವರ್ಷಗಳ ಹೋರಾಟವಿದೆ, ರಾಮ ಮಂದಿರ ಭಾರತೀಯರ ಭಾವನಾತ್ಮಕ ವಿಷಯವಾಗಿದ್ದು ಭಾರತೀಯರ ಕನಸು ಎಂದರು.
ರಾಮಮಂದಿರ ನಿರ್ಮಾಣವನ್ನ ಯಾವುದೇ ರಾಜಕೀಯ ಪಕ್ಷ ಬೆಂಬಲಿಸಿದರೂ ನಾವು ಅದನ್ನ ಸ್ವೀಕರಿಸಬೇಕು ಎಂದರು.