ಒಕ್ಕೂಟ ಉಳಿಸಿ ಆಂದೋಲನಕ್ಕೆ ಸೆ.14ರಂದು ಚಾಲನೆ

OKKUTA
Published on

ತುಮಕೂರು: ಒಕ್ಕೂಟ ಉಳಿಸಿ ಆಂದೋಲನದ ವತಿಯಿಂದ ರಾಜ್ಯ ಗಳ ಅಸ್ಮಿತೆ, ಹಕ್ಕು ಮತ್ತು ಪಾಲಿನ ರಕ್ಷಣೆ ಗಾಗಿ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದು, ಸೆ. 14ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಆಂದೋಲನದ ಪ್ರಮುಖ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಹಾಗೂ ಪ್ರೊ.ಎಸ್​.ಜಿ.ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಣಗೆರೆ ವೆಂಕಟರಾಮಯ್ಯ, ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು, ಪ್ರತಿಪಕ್ಷಗಳಾಗಲಿ, ಸಾಹಿತಿ ಪ್ರಗತಿಪರರಾಗಲಿ ಒಕ್ಕೂಟ ಸರ್ಕಾರದ ವಿರುದ್ಧ ಧ್ವನಿ ಎತ್ತಬಾರದು ಎನ್ನುವ ಸ್ಥಿತಿ ನಿಮಾರ್ಣ ವಾಗುತ್ತಿದೆ. ಭಾರತದ ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಆದರೆ ಕಳೆದ 10 ವರ್ಷ ಗಳಲ್ಲಿ ನಡೆಯುತ್ತಿರುವ ದಾಳಿ ಅತ್ಯಂತ ಅಪಾಯಕಾರಿ ಎಂದರು.

ದೇಶದ ವಿವಿಧ ರಾಜ್ಯ ಗಳ ಪ್ರಾದೇಶಿಕ ನಾಯಕರ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿ ಅವರನ್ನು ಗುರಿಮಾಡಿ ದಮನ ಮಾಡುವ ಪ್ರಯತ್ನ ನಡೆದಿದೆ. ಸ್ವತಂತ್ರ್ತ್ರ್ಯ ವೆಂದು ಭಾವಿಸಲಾದ ಎಲ್ಲಾ ತನಿಖಾ ಸಂಸ್ಥೆಗಳು ರಾಜಕೀಯ ವಿರೇಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ.ಸದ್ಯ ರಾಜ್ಯದಲ್ಲೂ ರಾಜ್ಯಪಾಲರ ಕಚೇರಿಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬಹುಮತದ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದ ರಾಜ್ಯದ ಸಿರಂ ಸಿದ್ದರಾಮಯ್ಯ ಮೇಲೆ ಅವರ ಪಾತ್ರವಿಲ್ಲದ ಪ್ರಕರಣವನ್ನು ಮುಂದು ಮಾಡಿ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದ್ದು ಇವೆಲ್ಲಒಕ್ಕೂಟ ವ್ಯವಸ್ಥೆ ದುರ್ಬಲ ಗೊಳಿಸುವ ಪ್ರಯತ್ನಗಳಾಗಿವೆ. ಈ ಅಭಿಯಾನ ಚಾಲನೆಯಲ್ಲಿ ಜಿಲ್ಲೆಯ ಪ್ರಗತಿಪರರು, ಹೋರಾಟ ಗಾರರು, ಸಾಮಾಜಿಕ ಚಿಂತಕರು, ಸಾಹಿತಿಗಳು, ಜನಸಾಮಾನ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಾಹಿತಿ ಪ್ರೊ.ಎಸ್​.ಜಿ.ಸಿದ್ದರಾಮಯ್ಯ ಮಾತನಾಡಿ, ಸೆ.14ರಂದು ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್​ ಗೋಪಾಲಗೌಡ ಅಭಿಯಾನಕ್ಕೆ ಚಾಲನೆ ನೀಡುವರು. ಜನಪರ ಚಿಂತನೆಯ ಸಾಹಿತಿ ದೇವನೂರು ಮಹದೇವ, ರಾಮಕೃಷ್ಣ ಸೇರಿ ಅನೇಕ ಸಾಹಿತಿಗಳು, ಸಾಮಾಜಿಕ ಚಿಂತಕರು, ಹೋರಾಟಗಾರರು ಭಾಗವಹಿಸುವರು ಎಂದರು.

ಈ ಆಂದೋಲನ ಒಂದು ದಿನಕ್ಕೆ ಸೀಮಿತವಲ್ಲ, ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ. ಭಾರತ ಒಕ್ಕೂಟ ವ್ಯವಸ್ಥೆಯಾದರೂ ಒಕ್ಕೂಟ ಎನ್ನುವುದನ್ನೇ ಮರೆತಂತೆ ಕೇಂದ್ರೀಕೃತ ಆಡಳಿತ, ರಾಜ್ಯಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಕೇಂದ್ರ ಸರ್ಕಾರವೆಂಬ ಪರಿಭಾಷೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಾಹಿತಿ ಡಾ.ನಟರಾಜ್​ ಬೂದಾಳ್​ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಪ್ರಾದೇಶಿಕ ಭಾಷೆ, ಶಿಕ್ಷಣದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇವೆಲ್ಲವನ್ನು ಜನರ ಮುಂದಿಡಲು ಅಭಿಯಾನ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್​, ಸಾಹಿತಿ ಎನ್​.ನಾಗಪ್ಪ, ರಂಗಕರ್ಮಿ ನಟರಾಜ್​ ಹೊನ್ನವಳ್ಳಿ, ಗಂಗಾಧರ್​, ಸಿ.ಕೆ.ಉಮಾಪತಿ, ನರಸೀಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net