ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿ ಇಲ್ಲದೆ ಬಿಲ್?; ಬಡಿದಾಡಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ

FIR_11
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿಯನ್ನೇ ನಡೆಸದೇ ಬಿಲ್ ಮಾಡಿಕೊಳ್ಳಲಾಗಿರುವ ಆರೋಪ ಅರಣ್ಯ ಇಲಾಖೆ ಮೇಲೆ ಕೇಳಿಬಂದಿದ್ದು ಅಧಿಕಾರಿ, ಸಿಬ್ಬಂದಿ ಪರಸ್ಪರ ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಕ್ರಮದ ಬಗ್ಗೆ ಮಾತಿಗೆ ಮಾತು ಬೆಳೆದು ಸಿಬ್ಬಂದಿ ಮೇಲೆ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಹಾಗೂ ಕಿಬ್ಬನಹಳ್ಳಿ ಉಪ ವಲಯ ಅರಣ್ಯಾಧಿಕಾರಿ ಎಚ್.ಮಂಜುನಾಥ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗಸ್ತು ಅರಣ್ಯ ಪಾಲಕ ನಂದೀಶ್ ಎಂಬುವವರು ಗುಬ್ಬಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿಗೆ ಆರೋಗ್ಯ ತಪಾಸಣೆಗಾಗಿ ಒಂದೇ ವಾಹನದಲ್ಲಿ ತೆರಳಿದ್ದ ಅಧಿಕಾರಿ, ಸಿಬ್ಬಂದಿ ಗುಬ್ಬಿ ರಿಂಗ್‌ರಸ್ತೆ ಚನ್ನಶೆಟ್ಟಿಹಳ್ಳಿ ಸಮೀಪ ಪರಸ್ಪರ ಹೊಡೆದಾಡಿಕೊಂಡಿದ್ದು ಗಾಯಗೊಂಡಿರುವ ನಂದೀಶ್ ಠಾಣೆ ಮೆಟ್ಟಿಲೇರಿದ್ದಾರೆ.

ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿಯನ್ನೇ ನಡೆಸದೇ ಹಣ ಬಿಡುಗಡೆ ಮಾಡಿಕೊಂಡಿರುವುದು ಹಾಗೂ ನೆಡುತೋಪು ಕಾವಲುಗಾರರಿಗೆ ನೀಡಬೇಕಿರುವ ಕೂಲಿ ನೀಡದೆ ವಂಚಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಪರಸ್ಪರ ಬಡಿದಾಟ ನಡೆದಿದೆ ಎನ್ನಲಾಗಿದ್ದು ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ತನಿಖೆಗೆ ಮುಂದಾಗಿದೆ.

ಹಲ್ಲೆಯನ್ನು ಖಂಡಿಸಿರುವ ಅರಣ್ಯ ಇಲಾಖಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಸೇವೆಗೆ ಗೈರುಹಾಜರಾಗಿz್ದÁರೆ ಎನ್ನಲಾಗಿದ್ದು ಹಿರಿಯ ಅಧಿಕಾರಿಗಳಿಗೆ ಹೊಸ ತಲೆನೋವು ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net