

ತುಮಕೂರು: ಜಿಲ್ಲೆಯಾದ್ಯಂತ ಅ.21 ರಿಂದ ನ.20ರ ವರೆಗೆ ಹಸು, ಎಮ್ಮೆ, ಹಂದಿ ಸೇರಿ ಎಲ್ಲಾ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಶುಪಾಲಕರ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಲಕ್ಷ ಜಾನುವಾರುಗಳಿದ್ದು, ಪಶುಪಾಲನಾ ಇಲಾಖಾ ಸಿಬ್ಬಂದಿ, ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು ಹಾಗೂ ಪಶುಸಖಿಯರು ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಶೇ.100ರಷ್ಟು ಲಸಿಕೆ ನೀಡಬೇಕು ಎಂದರು.
ಲಸಿಕೆ ನೀಡುವುದರಿಂದ ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಎಲ್ಲಾ ರೈತರು, ಪಶುಪಾಲಕರು, ಜಾನುವಾರು ಸಾಕಾಣಿಕೆದಾರರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಗಿರೀಶ್ಬಾಬು ರೆಡ್ಡಿ ಇದ್ದರು.