ತುಮಕೂರಿನಿಂದ ಸ್ಪರ್ಧಿಸುವಂತೆ ದೇವೇಗೌಡರನ್ನು ನಾವ್ಯಾರು ಕರೆದಿರಲಿಲ್ಲ: ಡಾ.ಜಿ.ಪರಮೇಶ್ವರ

HDD
Published on

ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡ ಅವರನ್ನು ತೂಮಕೂರಿನಿಂದ ಸ್ಪರ್ಧಿಸುವಂತೆ ಯಾರು ಕರೆದಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ತುಮಕೂರಿನಲ್ಲಿ ಶನಿವಾರ ಎಚ್.ಡಿ.ದೇವೇಗೌಡ ಕಾಂಗ್ರೆಸ್ ಮುಖಂಡರ ಮೇಲೆ ಮಾಡಿರುವ ಆರೋಪಗಳನ್ನೆಲ್ಲಾ ಪರಮೇಶ್ವರ್ ಅಲ್ಲಗಳೆದರು.

2019ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ, ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬರುತ್ತೀರ ಎಂದು ಖುದ್ದಾಗಿ ನಾನೇ ಅವರನ್ನು ಕೇಳಿದೆ. ನಾನು ಇನ್ನು ತೀರ್ಮಾನ ಮಾಡಿಲ್ಲಪ್ಪ, ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಲ್ಲಲು ತೀರ್ಮಾನ ಮಾಡಿಕೊಂಡಿದ್ದೀನಿ ಎಂದಿದ್ದರು.

ನಂತರ ನಮ್ಮ ಹೈಕಮಾಂಡ್ ಜತೆ ಅದೇನು ಮಾತನಾಡಿಕೊಂಡರೊ ಆ ಭಾಗ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂದು ಹೈಕಮಾಂಡ್‌ನಿಂದ ಸೂಚನೆ ಬಂತು. ನಾವೆಲ್ಲ ಪ್ರಮಾಣಿಕವಾಗಿ ದೇವೇಗೌಡ ಅವರ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅಂದಾಗ ಗೆಲ್ಲಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ದೇವೇಗೌಡ ಪರವಾಗಿ ಜೆಡಿಎಸ್ ಮುಖಂಡರೇ ಕೆಲಸ ಮಾಡಲಿಲ್ಲ ಎಂದರು.

ದೇವೇಗೌಡ ಅವರ ಬಗ್ಗೆ ಅಪಾರವಾದ ಗೌರವವಿದೆ, ನಮ್ಮ ರಾಜ್ಯದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ. ಅವರ ವ್ಯಕ್ತಿತ್ವದ ನಮಗೆ ಹೆಮ್ಮೆ ಇದೆ. ನಾವ್ಯಾರು ಅವರನ್ನು ಕರೆದುಕೊಂಡು ಹೋಗಿ ಸೋಲಿಸಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net