ಮೈದಾಳ ಕೆರೆಯಲ್ಲಿ ಕುಡಿಯುವ ನೀರು ಸಂಗ್ರಹಣೆ; ಡಾ.ಜಿ.ಪರಮೇಶ್ವರ

Param
Published on

ತುಮಕೂರು:ಮೈದಾಳ ಕೆರೆಯಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕೆ ಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸ್ವಾತಂತ್ರೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ಬೆಳೆಯುವುದು ಅನಿವಾರ್ಯ. ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿ ಅಗಬೇಕು. ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೇಮಾವತಿ ನೀರು ತೆಗೆದುಕೊಂಡು ಬರಲಾಯಿತು. ತುಮಕೂರಿಗೆ ಕುಡಿಯುವ ನೀರು, ದಾರಿಯಲ್ಲಿ ಬರುವ ಎಲ್ಲ ಊರುಗಳಿಗು ಕುಡಿಯುವ ನೀರು ಹಂಚಿಕೆಯಾಗಿದೆ‌. ಶೇ 70ರಷ್ಟು ಕಾಮಗಾರಿಯಾಗಿದೆ. ಬಾಕಿ 30ರಷ್ಟು ಹಂತಹಂತವಾಗಿ ಕ್ಯಾನಲ್‌ಗಳ ನಿರ್ಮಾಣ ಆಗಲಿವೆ‌ ಎಂದರು.

ತುಮಕೂರು ನಗರಕ್ಕೆ 3.87 ಟಿಎಂಸಿ ನೀರನ್ನು ಅಲೋಕೇಷನ್ ಮಾಡಿಕೊಟ್ಟಿದ್ದಾರೆ. ಅಷ್ಟು ಪ್ರಮಾಣದ ನೀರು ಸಂಗ್ರಹಿಸಲು ಅವಕಾಶವಿಲ್ಲ. 2 ಟಿಎಂಸಿ ಯಷ್ಟು ಮಾತ್ರ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸಬಹುದಾಗಿದೆ. ಮೈದಾಳ ಕೆರೆಗೆ ತುಂಬಿಸಲು ಯೋಜನೆ ಸಿದ್ಧಪಡಿಸಲಾಗಿದೆ‌. ಈ ಯೋಜನೆ ಆದರೆ, ನಗರಕ್ಕೆ ಇನ್ನು ಚೆನ್ನಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ನಗರದಲ್ಲಿ 700ಕ್ಕು ಹೆಚ್ಚು ಬೋರ್‌ಗಳಿವೆ. ಬೋರ್‌ವೆಲ್ ನೀರು ಸ್ಥಗಿತ ಮಾಡಿ, ಶುದ್ಧ ಕುಡಿಯುವ ಕೊಡಬೇಕು ಉದ್ದೇಶ ಇಟ್ಟುಕೊಂಡು ಮೈದಾಳ ಕೆರೆಯನ್ನು ಸಂಗ್ರಹ ಮಾಡಬೇಕು ಎಂದುಕೊಂಡಿದ್ದಾರೆ. ಸಾಧ್ಯವಾದರೆ. ಹೆಬ್ಬಾಕ ಕೆರೆ, ಮೆಳೂರು ಕೆರೆ ತುಂಬಿಸಲು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಸ ವಿಲೇವಾರಿಗೆ ಅಜಗೊಂಡನಹಳ್ಳಿ ಬಳಿ ಮಾಡಲಾಗಿದೆ. 'ವೇಸ್ಟ್ ಟು ಎನರ್ಜಿ ಪ್ರಾಜೆಕ್ಟ್' ಮಾಡಿದರೆ ವಿದ್ಯುಚ್ಛಕ್ತಿ ಬರುತ್ತದೆ. ಸುಲಭವಾಗಿ ಕಸ ವಿಲೇವಾರಿಯಾಗುತ್ತದೆ. ನಗರವೂ ಸ್ವಚ್ಛವಾಗಿರುತ್ತದೆ. ಆ ರೀತಿಯ ಯೋಚನೆ ಮಾಡುತ್ತಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ಪ್ರಾಜೆಕ್ಟ್ ಸಿದ್ಧಪಡಿಸಿದ್ದಾರೆ. ವೇಸ್ಟ್ ಟು ಎನರ್ಜಿ ಪ್ಲಾಂಟ್ ಮಾಡುತ್ತೇವೆ ಎಂದರು.

ತ್ಯಾಜ್ಯ ನೀರನ್ನು ಶುದ್ಧಗೊಳಿಸಿ ನೀರಾವರಿಗೆ ಬಿಡಬಹುದು. ಇದನ್ನು ಮಾಡಲಾಗಿದೆ. 130 ಕೋಟಿ ರೂ. ಖರ್ಚು ಮಾಡಿ ಟರ್ಶಿಯರಿ ಟ್ರೀಟ್ ಮೆಂಟ್ ಮಾಡಿದರೆ, ಕುಡಿಯಬಹುದು. ಅಷ್ಟು ಶುದ್ಧವಾಗಿ ಬರುತ್ತದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಉದ್ಘಾಟಿಸುತ್ತೇವೆ‌. ವಸಂತನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಮಾಡಲಾಗುತ್ತಿದೆ. 30 ಎಂಎಲ್‌ಡಿ ಕುಡಿಯಲು ಯೋಗ್ಯವಾದ ನೀರನ್ನು ಕೈಗಾರಿಕೆಯವರಿಗೆ ಪೂರೈಸುತ್ತೇವೆ. ವಾಪಸ್ ತಂದು ನಗರಕ್ಕೆ ಪೂರೈಸಬಹುದು. ತ್ಯಾಜ್ಯ ನೀರನ್ನು ಕುಡಿಯುವಂತಾಯಿತಲ್ಲ ಎಂಬುದು ಬರಬಾರದು ಎಂದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅಂದಾಜು 140 ಕೋಟಿ ರೂ. ಆಸ್ಪತ್ರೆ ಮಂಜೂರಾಗಿದೆ. 450 ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಲು ಹಣ ಬಿಡುಗಡೆಯಾಗಿದೆ. ಹಳೇ ಆಸ್ಪತ್ರೆ ಕಟ್ಟಡ ಶಿಥಿಲವಾಗಿದೆ. ಅದನ್ನು ತೆರವುಗೊಳಿಸಲಾಗುವುದು. ಕೆಹೆಚ್‌ಎಸ್‌ಆರ್‌ಡಿಪಿ ಟೆಂಡರ್ ಕರೆದು ನಿರ್ಮಾಣ ಮಾಡಲಿದ್ದಾರೆ ಎಂದರು. ತುಮಕೂರು ಬೆಳೆದ ಮೇಲೆ‌ ಮತ್ತೆ ಬೆಂಗಳೂರಿಗೆ ಹೋಗುವ ಅವಶ್ಯಕತೆಯಿಲ್ಲ. ಆ ನಿಟ್ಟಿನಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ 150 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಶೇ 70ರಷ್ಟು ಅನುದಾನ ರಸ್ತೆಗೆ ಖರ್ಚು ಮಾಡಬೇಕು. ಪಾರ್ಕ್ ಅಭಿವೃದ್ಧಿ ಶಾಲೆಗಳಿಗೆ ಖರ್ಚು ಮಾಡಲಾಗುವುದು. ನಗರದಲ್ಲಿ ಎಲ್ಲೆಂದರಲ್ಲಿ ಮಾಂಸ ಮಾರುತ್ತಾರೆ. ಹತ್ತು ಕಡೆ ಮಾಂಸ ಮಾರುಕಟ್ಟೆ ಮಾಡುವ ಯೋಚನೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ಮಾರುಕಟ್ಟೆ ನೀರ್ಮಾಣಕ್ಕೆ ಅವಕಾಶ ಸಿಕ್ಕಿಲ್ಲ. ಬೇರೆ ಯೋಜನೆಯಲ್ಲಿ ಮಾಂಸ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ವಿವರಿಸಿದರು.

ನಗರ ಸುಂದರೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರು ಪ್ರಾರಂಭಿಸಿದ್ದಾರೆ. ಅದನ್ನು ಮುಂದುವರಿಸುತ್ತೇವೆ. 18 ಪಾರ್ಕ್ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಹಣ ಒದಗಿಸಿಕೊಳ್ಳಲಾಗಿದೆ. ಅಕ್ಕತಂಗಿದರ ಕೆರೆಯನ್ನು ಲಾಲ್ ಬಾಗ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಅರಣ್ಯ ಇಲಾಖೆಯಿಂದ ಅನುಮತಿ ಸಿಗಬೇಕು. ಅದೇಪ್ರಕಾರ ಅಮಾನಿಕೆರೆ ಮಾಡಲಾಗುವುದು ಎಂದರು ತಿಳಿಸಿದರು.

ಜೆ.ಸಿ.ರಸ್ತೆ ಮಾರುಕಟ್ಟೆ ಪ್ರಸ್ತಾವನೆ ಕ್ಯಾಬಿನೆಟ್‌ಗೆ ಕಳುಹಿಸಲು ಕ್ರಮ ತಡಗೆದುಕೊಳ್ಳಲಾಗುತ್ತಿದೆ. ಗಣೇಶನ ದೇವಸ್ಥಾನ ಇರುವುದರಿಂದ ಅಪಸ್ವರಗಳು ಬಂದಿದೆ. ಗಣೇಶ್‌ನನ್ನು ನಾವು ತೆಗೆಯುವುದಿಲ್ಲ. ಗಣೇಶನನ್ನು ನಾವು ಮುಟ್ಟುವುದಿಲ್ಲ. ಅಲ್ಲೇ ಇರುತ್ತಾನೆ. ಅಲ್ಲೇ ದೇವಸ್ಥಾನ ಕಟ್ಟುತ್ತೇವೆ. ಜೀರ್ಣೋದ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕೋರ್ಟ್ ಜಾಗಕ್ಕೆ ಸಮಸ್ಯೆ ಎನು ಆಗಿಲ್ಲ. 15 ಎಕರೆ ಭೂಮಿ ಕೇಳಿದ್ದರು. ಜಿಲ್ಲಾಧಿಕಾರಿಗಳು ಜಾಗವನ್ನು ಗುರುತಿಸಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಆ ಜಾಗದಲ್ಲಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಇದಕ್ಕೆ ನಮ್ಮ ತಕಾರಾರು ಏನು ಇಲ್ಲ ಎಂದರು.

11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಸಹಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಮಾಡಲು ತೀರ್ಮಾನ ಆಗಿದೆ. ಇದರಲ್ಲಿ ತುಮಕೂರು ಸೇರಿದೆ. ಪ್ರತಿ ಬಜೆಟ್‌ನಲ್ಲಿ ನಾಲ್ಕೈದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯನ್ನು ಆದ್ಯತೆ ಮೇರೆಗೆ ಮುಂದಿನ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ನೀಡುವಂತೆ ಒತ್ತಾಯಿಸುತ್ತೇವೆ. ಅದು ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹೈದ್ರಾಬಾದ್ ಕಂಪನಿಯು ಫಿಸಿಬಲಿಟಿ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಸರ್ಕಾರ ಅದನ್ನು ಪರಿಗಣಿಸುತ್ತದೆ.

ಕಳೆದ ಕ್ಯಾಬಿನೆಟ್‌ನಲ್ಲಿ ಬೆಂಗಳೂರು-ನೆಲಮಂಗಲ-ತುಮಕೂರು, ಬೆಂಗಳೂರು-ಮೈಸೂರು, ಬೆಂಗಳೂರು-ಕೋಲಾರ, ಬೆಂಗಳೂರು-ಕನಕಪುರ ಇಷ್ಟು ಯೋಜನೆಗಳನ್ನು ಎರಡು ಮಾದರಿಯಲ್ಲಿ ಮಾಡಲು ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ. ಒಂದು ಸಬ್ ಅರ್ಬನ್ ರೈಲು ಅಥವಾ ಮೆಟ್ರೋ ರೈಲು. ಈ ಎರಡು ಫಿಸಿಬಲಿಟಿ ವರದಿ ನೀಡಬೇಕು ಎಂದು 25 ಕೋಟಿ ರೂ. ಕ್ಯಾಬಿನೆಟ್‌ನಲ್ಲಿ ಅನುಮತಿಸಲಾಗಿದೆ. ನಾವು ಇದರಲ್ಲಿ ಒಂದು ಹೆಜ್ಜೆ ಮುಂದೆ ಇದ್ದೇವೆ. ಪಿಪಿಪಿ ಮಾದರಿಯಲ್ಲಿ ಮಾಡಲು ಬೆಂಗಳೂರಿನಿಂದ ತುಮಕೂರಿಗೆ ಎಕ್ಸ್‌ಪ್ರೆಶನ್ ಆಫ್ ಇಟ್ರೆಶನ್ ಕರೆಯುತ್ತಾರೆ. ಇದಕ್ಕೆ ಪತ್ರಗಳು ಬಂದಿವೆ. ಪ್ರಾಜೆಕ್ಟ್ ಕೈಗೆತ್ತಿಗೊಳ್ಳಲು ಸರ್ಕಾರಕ್ಕೆ ಒಪ್ಪಿಗೆಯಾದರೆ ಎಸ್‌ಬಿವಿ ಮಾಡಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಟ್ರೋ ರೈಲು ಪ್ರಾಜೆಕ್ಟ್ ತರಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದರು.

ಹತ್ತುಪಥ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸಚಿವರಾದ ನಿತೀನ್ ಗಡ್ಕರಿಯವರನ್ನು ಭೇಟಿಯಾಗಿ ಮಾತನಾಡಿದ್ದೆವು‌. ಅಡಚಣೆ ಇರುವುದನ್ನು ಅವರು ತಿಳಿಸಿದ್ದರು. ಜಿಲ್ಕಾಧಿಕಾರಿಗಳು, ಎಸ್‌ಪಿಗಳು ಅಡಚಣೆಯನ್ನು ತೆರವುಗೊಳಿಸಿದ್ದಾರೆ. ವೇಗವಾಗಿ ಕಾಮಗಾರಿ ನಡೆಯುತ್ತಿದ್ದು, 2026 ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ ಎಂದು ಹೇಳಿದರು‌.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 41 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಕೆಲಸ ಪ್ರಾರಂಭ ಮಾಡಬೇಕಿತ್ತು. 160 ಕೋಟಿ. ರೂ.

ಮೀಸಲಿಟ್ಟಿದ್ದಾರೆ. ಐಪಿಎಲ್ ಕಾಲ್ತುಳಿತದ ನಂತರ‌ ಸಮಸ್ಯೆಯಾಗಿದೆ. ಆದಷ್ಟು ಶೀಘ್ರವಾಗಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಶುರು ಮಾಡುತ್ತಾರೆ. ತುಮಕೂರಿನಲ್ಲಿ ಸ್ಟೇಡಿಯಂ ನಿರ್ಮಾಣವಾದರೆ ಬೆಂಗಳೂರಿನಲ್ಲಿರುವ ಸಮಸ್ಯೆ ಬಗೆಹರಿಯುತ್ತದೆ.

ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ 34ಮ3 ಸಾವಿರ ಸೀಟುಗಳ ಅವಕಾಶವಿದೆ. ಅಹ್ಮದಾಬಾದ್‌ ಸ್ಟೇಡಿಯಂನಲ್ಲಿ ಲಕ್ಷ ಸೀಟುಗಳ ಲಭ್ಯವಿದೆ. ಇದನ್ನು ಹೊರರುಪಡಿಸಿದರೆ ದೇಶದ ಯಾವ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಕ್ಷ ಸೀಟುಗಳಿಲ್ಲ. ತುಮಕೂರಿನಲ್ಲಿ ಒಂದು ಲಕ್ಷ ಹಾಸನಗಳ ಸ್ಟೇಡಿಯಂ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ‌. ಸ್ಟಾರ್ ಹೋಟೆಲ್ ತರಲು ಹೂಡಿಕೆದಾರರೊಂದಿಗೆ ಮಾತನಾಡಲಾಗುತ್ತಿದೆ. ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net