ಮುದ್ದಹನುಮೇಗೌಡರ ಸ್ಪರ್ಧೆ ನನ್ನ ಏಕ ತೀರ್ಮಾನವಲ್ಲ; ಗೃಹ ಸಚಿವ ಪರಮೇಶ್ವರ

PARAMMMM
Published on

ಕೊರಟಗೆರೆ: ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಜಿಲ್ಲಾ ಮುಖಂಡರ ಸಹನುಮತದ ಒಪ್ಪಿಗೆಯ ಅಭಿಪ್ರಾಯವನ್ನು ವರಿಷ್ಠ ಮುಂದಿಡಲಾಗಿತ್ತು‌, ಇದಕ್ಕೆ ವರದಿಷ್ಟರು ಒಪ್ಪಿದ್ದಾರೆ. ಮುದ್ದಹನುಮೇಗೌಡರ ಸ್ಪರ್ಧೆ ನನ್ನ ಏಕ ತೀರ್ಮಾನವಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಪರಮೇಶ್ವರ ಅವರು ಯಾರ ಹೆಸರು ಹೇಳ್ತಾರೋ ಅವರಿಗೆ ಟಿಕೆಟ್ ನೀಡಬೇಕು ಅಂದರು. ಅದಕ್ಕೆ ನಾನು ಬೇಡ ಎಂದಿದ್ದೇನೆ. ಜಿಲ್ಲೆಯ ಎಲ್ಲ ಮುಖಂಡರ ಜೊತೆ ಚರ್ಚಿಸಿ ಅಭಿಪ್ರಾಯ ಬೇಕು ಎಂಬುದನ್ನು ತಿಳಿಸಿದೆ. ಮುದ್ದಹನುಮೇಗೌಡ ಅವರು ಸ್ಪರ್ಧಿಸಬೇಕು ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದರು. ಸಭೆಯಲ್ಲಿ ಚರ್ಚೆಯಾದ ಅಭಿಪ್ರಾಯವನ್ನೇ ವರಿಷ್ಟರ ಮುಂದಿಡಲಾಯಿತು ಎಂದರು.

ಜಿಲ್ಲಾ ಮುಖಂಡರ ಅಭಿಪ್ರಾಯವನ್ನು ಆಧರಿಸಿ ಮೂರ್ನಾಲ್ಕು ಹೆಸರುಗಳನ್ನು ಇಟ್ಟುಕೊಂಡು ಎಐಸಿಸಿ ಮತ್ತು ಕೆಪಿಸಿಸಿಯವರು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದ್ದಾರೆ. ಇದರಲ್ಲಿ ಮುದ್ದಹನುಮೇಗೌಡ ಅವರು ಗೆಲ್ಲುವ ಅಭ್ಯರ್ಥಿ ಎಂಬುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು‌.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಹಠಕ್ಕೆ ಬಿದ್ದು ಮೆಟ್ರೋ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಒಪ್ಪಿಸಿದ್ದೇನೆ‌. ಮೆಟ್ರೋ ರೈಲು ಬಂದರೆ ತುಮಕೂರು ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹೀಗಾಗಿ, ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಮುದ್ದಹನುಮೇಗೌಡರನ್ನು ಬಹುಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಪ್ರತಿಸ್ಪರ್ಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯಿಂದ‌ ನೀರು ಬರಲಿದೆ. ವಸಂತಾನರಸಾಪುರ ಕೈಗಾರಿಕಾ‌ ಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲಾಗುತ್ತಿದ್ದು ಇನ್ನೊಂದು ತುಮಕೂರು ಸೃಷ್ಟಿಯಾಗಲಿದೆ.‌ ಇದೆಲ್ಲವು ನೀವು ಕೊಟ್ಟ ಶಕ್ತಿಯಿಂದ ಸಾಧ್ಯವಾಗುತ್ತಿದೆ. ಸೋಮಣ್ಣ ಸಂಸದನಾದರೆ ನಮ್ಮ ಜೊತೆ ಹೊಂದಿಕೊಳ್ಳುವುದಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲಿವೆ. ಹೊಸ ಯೋಜನೆಗಳನ್ನು ತರಲಿ ಆಗುವುದಿಲ್ಲ. ಹೀಗಾಗಿ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸುವ ಮೂಲಕ ನಮ್ಮ‌ಕೈ ಬಲಪಡಿಸಬೇಕು ಎಂದು ಹೇಳಿದರು

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಎನ್ನುವುದು ಬಿಜೆಪಿಯವರಿಂದ ಹುಟ್ಟಿದೆ. ಯಾರಾದ್ರು ಬಂದು ಹಾಗ್ ಮಾಡ್ತೀವಿ, ಹೀಗ್ ಮಾಡ್ತೀವಿ ಅಂದ್ರೆ ಕಿವಿಗೊಡಬೇಡಿ. ಏಕೆಮದಮರೆ ಈ ಚುನಾವಣೆಯಲ್ಲಿ ಮಕ್ಕಳ, ರೈತರ ಭವಿಷ್ಯವಿದೆ. 2024ರೊಳಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಮೆಣಸಿನಕಾಯಿ, ಕೊಬ್ಬರಿ ಬೆಳೆ ಸೇರಿದಂತೆ ಮುಂತಾದ ಧವಸ ಧಾನ್ಯಗಳ ಬೆಲೆ ಕುಸಿದಿದೆ. ಈ ಬಗ್ಗೆ ಮೋದಿಯವರು ಒಂದು ಮಾತು ಆಡುತ್ತಿಲ್ಲ ಎಂದು ಬೇಸರಿಸಿದರು.

ಮೋದಿಯವರು ಕಳೆದ ಹತ್ತು ವರ್ಷದ ಅಭಿವೃದ್ಧಿಯಲ್ಲಿ ಯಾವುದಾದರು ಒಂದು ಜನಪ್ರೀಯ ಯೋಜನೆ ಕೊಟ್ಟಿದ್ದಾರೆಯೇ ಎಂಬುದನ್ನು ಹೇಳಲಿ. ತುಮಕೂರು ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡಲಿಲ್ಲ.‌ ಬಡವರ ಮನೆ ಹಾಳು ಮಾಡುವುದನ್ನೆ ಮೋದಿ ಗ್ಯಾರಂಟಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್‌ನವರು ಎಣ್ಣೆ-ಸೀಗೆಕಾಯಿಯ ಹಾಗೇ ವರ್ತಿಸುತ್ತಿದ್ದರು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆಗ ಕಾಂಗ್ರೆಸ್ ಪಕ್ಷದ ಐಡಿಯಾಲಜಿ ಜೊತೆ ಎಚ್.ಡಿ.ದೇವೆಗೌಡ ಅವರು ಹೊಂದಿಕೊಂಡಿದ್ದರು. ಸೋನಿಯಾಗಾಂಧಿ ಅವರು ಹಿರಿಯ ರಾಜಕಾರಣಿ ದೇವೇಗೌಡ ಅವರನ್ನು ಗೆಲ್ಲಿಸುವಂತೆ ಖುದ್ದಾಗಿ ಹೇಳಿದ್ದರು. ಹೀಗಾಗಿ ಅವರ ಗೆಲುವಿಗೆ ಶ್ರಮಿಸಲಾಯಿತು. ದುರ್ದೈವದಿಂದ ದೇವೇಗೌಡರು ಸೋತರು. ಕುಮಾರಸ್ವಾಮಿ ಅವರನ್ನು ನಾವು ಮುಖ್ಯಮಂತ್ರಿ ಮಾಡಿದ್ದೆವು ಎಂಬುದನ್ನು ಮರೆತಿದ್ದಾರೆ. ಈಗ ಎಣ್ಣೆ-ಸೀಗೆಕಾಯಿ‌ (ಬಿಜೆಪಿ-ಜೆಡಿಎಸ್) ಒಂದಾಗಿವೆ. ಚುನಾವಣಾ ಮಧ್ಯದಲ್ಲಿಯೇ ಬೇರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net