

ತುಮಕೂರು: ವೇತನ ತಾರತಮ್ಯ ನಿವಾರಣೆ ದೃಷ್ಠಿಯಿಂದ ಔರಾದಕರ್ ವರದಿಯನ್ವಯ ಪೊಲೀಸರ ವೇತನ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಪೊಲೀಸ್ ವಸತಿ ಸಂಕಿರ್ಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ, ವರದಿ ಜಾರಿಯಿಂದ ಸರ್ಕಾರಕ್ಕೆ 500ಕೋಟಿ ರೂ. ವಾರ್ಷಿಕ ಹೊರೆ ಬರಲಿದೆಯಾದರೂ ವರದಿ ಜಾರಿಗೆ ಸರ್ಕಾರ ಚಿಂತಿಸಿದೆ ಎಂದರು.
ರಾಜ್ಯದಲ್ಲಿ ಪೊಲೀಸರಿಗಾಗಿ 13 ಸಾವಿರ ವಸತಿ ನಿರ್ಮಿಸಲಾಗಿದ್ದು ಶೇ.40 ಸಿಬ್ಬಂದಿಗೆ ಮನೆ ನೀಡಿದ್ದೇವೆ, ಮುಂದಿನ ಐದು ವರ್ಷದಲ್ಲಿ ಶೇ.70ರಷ್ಟು ಸಿಬ್ಬಂದಿಗೆ ಮನೆ ನೀಡುವ ಗುರಿ ಹೊಂದಲಾಗಿದೆ ಎಂದರು.
ದೇಶದ ಯಾವ ರಾಜ್ಯದಲ್ಲಿಯೂ ಪೊಲೀಸ್ ವಸತಿಗೆ ಇಷ್ಟೊಂದು ಆದ್ಯತೆ ನೀಡಿಲ್ಲ, ತುಮಕೂರು ನಗರದಲ್ಲಿಯೂ 16ಕೋಟಿ ರೂ. ವೆಚ್ಚದಲ್ಲಿ 73 ವಸತಿ ನಿರ್ಮಿಸಲಾಗಿದೆ, ಕೊಡಿಗೇನಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು.
1ಲಕ್ಷ ಜನರಿಗೆ 162 ಪೊಲೀಸರು ಬೇಕು ಆದರೆ, ಕಳೆದ ನಾಲ್ಕು ವರ್ಷದಿಂದ ಇಲಾಖೆಯಲ್ಲಿ ಯಾವುದೇ ಹುದ್ದೆಗಳ ಭರ್ತಿಯಾಗಿಲ್ಲ, ಮುಂದಿನ ಎರಡು ವರ್ಷದಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದರು.
ಮಂಜೂರು ಹುದ್ದೆಗಳಲ್ಲಿಯೂ ಸಿವಿಲ್ ಪೊಲೀಸ್ ಸಿಗೋದು ಕಡಿಮೆ, 40ಸಾವಿರ ಜನರು ಸಿವಿಲï ಸೇವೆ ಮಾಡುತ್ತಿದ್ದೇವೆ, ಈ ಸಂಖ್ಯೆ ಹೆಚ್ಚಿಸಬೇಕು, ಪಿಎಸ್‌ಐ ನೇಮಕ ಹಗರಣದಿಂದ ಹೊಸ ನೇಮಕಾತಿಗೆ ತೊಡಕಾಗಿದೆ ಹಾಗಾಗಿ, 600 ಎಎಸ್‌ಐ ಗಳಿಗೆ ಬಡ್ತಿ ನೀಡಲಾಗಿದೆ, 30ಎಎಸ್ಪಿ ಗಳಾಗಿದ್ದಾರೆ, ಒಂದು ಜಿಲ್ಲೆಗೆ ಇಬ್ಬರು ಎಎಸ್‌ಪಿಗಳ ನೇಮಕವಾಗಲಿದೆ ಎಂದರು.