

ತುಮಕೂರು: ಕ್ರೀಡಾ ಮನೋಭಾವನೆ ಬೆಳೆಸಿಕೊಂಡ ಯುವಕರು, ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಕುಗ್ಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕೊರಟಗೆರೆ ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ 'ಕೊರಟಗೆರೆ ಪ್ರೀಮಿಯರ್ ಲೀಗ್ ಡಾ. ಜಿ.ಪರಮೇಶ್ವರ ಕಪ್' ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಯುವಕರಿಗೆ ಕ್ರೀಡಾ ಮನೋಬಾವಾನೆ ಬೆಳೆಸಿಕೊಳ್ಳುವುದರಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ ಹೆಚ್ಚಾಗುತ್ತದೆ. ಸೋಲಿಗೆ ಆದ ಕಾರಣಗಳನ್ನು ಸರಿಪಡಿಸಿಕೊಂಡು ಮುನ್ನೆಡೆಯುತ್ತೇವೆ ಎಂದರು.
ಯುವಕರು ದುಶ್ಚಟಗಳಿಂದ ದೂರ ಇರಬೇಕು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ದ್ರವ್ಯ ಸೇವನೆಗೆ ಅಂಟಿಕೊಳ್ಳುತ್ತಿದ್ದಾರೆ. ಇದು ನಿಮ್ಮ ಜೀವನವನ್ನೆ ಸರ್ವನಾಶ ಮಾಡಲಿದ್ದು, ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಮಂತ್ರಿಯವರು ಮತ್ತು ನಾನು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದ್ದೇವೆ. ಯುವಕರು ಮಾದಕವ್ಯಸನದಿಂದ ದೂರ ಇದ್ದು, ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ತಿಳಿಸಿದರು.