

ತುಮಕೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದ್ದು ತುಮಕೂರು ಕ್ಷೇತ್ರದಲ್ಲಿ ಸ್ಫರ್ಧೆಗೆ ತಯಾರಿ ನಡೆಸಿದ್ದ ಮಾಜಿ ಸಚಿವ ವಿ.ಸೋಮಣ್ಣಗೆ ಪ್ರಭಲ ವಿರೋಧ ವ್ಯಕ್ತವಾಗಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಪ್ರಮುಖ ನೊಳಂಬ ಲಿಂಗಾಯತ ಗುರುಗಳಾದ ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಶ್ರೀಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಶ್ರೀಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿಯ ಶ್ರೀವಿಭವ ವಿದ್ಯಾಶಂಕರ ಸ್ವಾಮೀಜಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಲೋಕಸಭೆ ಟಿಕೆಟ್ ಗೆ ಬೇಡಿಕೆ ಇಟ್ಟಿರುವುದು ಕುತೂಹಲ ಮೂಡಿಸಿದೆ.
ನೊಳಂಬ ಸಮುದಾಯ ರಾಜ್ಯದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಈ ಸಮುದಾಯಕ್ಕೆ ಕಳೆದ 40 ವರ್ಷದಿಂದ ರಾಜಕೀಯ ಅವಕಾಶ ಸಿಕ್ಕಿದೆ ಆದರೆ, ಈ ಚುನಾವಣೆಯಲ್ಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂದು ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.
ಇಂತಹವರಿಗೆ ಟಿಕೆಟ್ ನೀಡಬೇಕು ಎಂದು ನಾವು ಕೇಳುವುದಿಲ್ಲ ಆದರೆ, ನೊಳಂಬ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಸಮಾಜ ಬಯಸಿದರೆ ಮಠಾಧೀಶರೇ ಚುನಾವಣಾ ಕಣಕ್ಕಿಳಿಯಲು ಸಿದ್ಧ ಎಂದು ಗೊಲ್ಲಹಳ್ಳಿಯ ಶ್ರೀವಿಭವ ವಿದ್ಯಾಶಂಕರ ಸ್ವಾಮೀಜಿ ಹೇಳಿದರು.
ನೊಳಂಬ ಲಿಂಗಾಯತ ಸಮುದಾಯದ ಅಭ್ಯರ್ಥಿ ತುಮಕೂರು ಕ್ಷೇತ್ರದಲ್ಲಿ ಮಾತ್ರ ಗೆಲ್ಲಲು ಅವಕಾಶವಿದ್ದು ಸಂಪ್ರದಾಯದಂತೆ ಈ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಶ್ರೀಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಒತ್ತಾಯಿಸಿದರು.
ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಹಾಸನ, ಚಿತ್ರದುರ್ಗ ಮತ್ತಿತರರ ಕ್ಷೇತ್ರದಲ್ಲಿಯೂ ನಿರ್ಣಾಯಕ ಸಂಖ್ಯೆಯಲ್ಲಿರುವ ನೊಳಂಬ ಸಮುದಾಯಕ್ಕೆ ಅವಕಾಶ ತಪ್ಪಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ನೊಳಂಬ ಸಮುದಾಯಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದ್ದು ಇಂತಹವರಿಗೆ ಕೊಡಿ ಎಂದು ನಾವು ಹೇಳುವುದಿಲ್ಲ. ಸಮುದಾಯದ ಹೆಸರಿನಲ್ಲಿಯೇ ಅಧಿಕಾರ ಪಡೆದಿರುವ ಜಿ.ಎಸ್.ಬಸವರಾಜು ಅವರಿಗೂ
ಸಮುದಾಯದ ಅಭ್ಯರ್ಥಿ ಪರವಾಗಿರಬೇಕು ಎಂದು ಸೂಚಿಸುತ್ತೇವೆ. ಸಮಾಜ ಒಟ್ಟಾಗಿ ಬಯಸಿದರೆ ಸ್ವಾಮೀಜಿಗಳೇ ಸ್ಫರ್ಧೆ ಮಾಡಲು ಸಿದ್ಧರಿದ್ದೇವೆ.
ಶ್ರೀವಿಭವ ವಿದ್ಯಾಶಂಕರ ಸ್ವಾಮೀಜಿ
ಗೊಲ್ಲಹಳ್ಳಿ ಮಠ