

ತುಮಕೂರು: ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳ ಪೈಕಿ 483 ದೂರುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ 2 ಅವರು ನವೆಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧ ಉಪವಿಭಾಗಗಳಲ್ಲಿ ಆಯೋಜಿಸಲಾಗುವ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿದ ಅವರು, ಉಪ ಲೋಕಾಯುಕ್ತರವರು ಇಲಾಖಾವಾರು ಸಾರ್ವಜನಿಕ ದೂರುಗಳ ವಿಚಾರಣೆ ಪರಿಶೀಲನೆ ನಡೆಸಲಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದರು.
ಉಪ ಲೋಕಾಯುಕ್ತ ಅವರು ನವೆಂಬರ್ 14 ಮತ್ತು 15ರಂದು ಕುಣಿಗಲ್, ಗುಬ್ಬಿ ಹಾಗೂ ತುಮಕೂರು ಉಪವಿಭಾಗಗಳಲ್ಲಿ ವಿಚಾರಣೆ ನಡೆಸಲಿದ್ದಾರೆ. ನಂತರ ನವೆಂಬರ್ 21ರಂದು ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಉಪವಿಭಾಗಗಳಲ್ಲಿ ಹಾಗೂ ನವೆಂಬರ್ 29ರಂದು ಪಾವಗಡ ಹಾಗೂ ಮಧುಗಿರಿ ಉಪವಿಭಾಗಗಳಲ್ಲಿ ವಿಚಾರಣೆ ಮತ್ತು ವಿಲೇವಾರಿ ಸಭೆ ನಡೆಸಲಿದ್ದಾರೆ ಎಂದರು.
ಸಾರ್ವಜನಿಕರಿಂದ ದಾಖಲಾಗಿರುವ ಪ್ರಕರಣಗಳನ್ನು ಗರಿಷ್ಠ ಮಟ್ಟದಲ್ಲಿ ವಿಲೇವಾರಿಗೊಳಿಸಲು ಲೋಕಾಯುಕ್ತ ಇಲಾಖೆ ಬದ್ಧವಾಗಿದ್ದು, ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಉದ್ದೇಶದಿಂದ ಈ ಸಭೆಗಳನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ ಹಾಗೂ ಈಶ್ವರಪ್ಪ, ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್, ತೋಟಗಳಿಗೆ ಇಲಾಖೆ ಜಂಟಿ ನಿರ್ದೇಶಕ ಶಾರದಮ್ಮ ಮತ್ತಿತರರು ಇದ್ದರು.