

ತುಮಕೂರು: ಲೋಕಸಭೆ ಚುನಾವಣೆಗೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಹಿಂದೆಯೇ ಪಕ್ಷಾಂತರ ಪರ್ವ ಮುಂದುವರಿದಿದೆ. ತಿಪಟೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಗ್‌ಶಾಕ್ ಎದುರಾಗಿದೆ.
ಲಿಂಗಾಯತ ಸಮುದಾಯದ ಪ್ರಮುಖ ಮುಖಂಡ ಲೋಕೇಶ್ವರ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದು ಶೀಘ್ರದಲ್ಲಿಯೇ ಬಿಜೆಪಿ ಸೇರುವ ಸಾಧ್ಯತೆಯಿದೆ. ಸ್ಥಳೀಯ ಶಾಸಕ ಕೆ.ಷಡಕ್ಷರಿ ವಿರುದ್ಧ ಅಸಮಧಾನಗೊಂಡಿದ್ದ ಲೋಕೇಶ್ವರ ಅವರನ್ನು ಸೆಳೆಯುವಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಲೋಕೇಶ್ವರ ಈ ಹಿಂದೆ ಕೆಜೆಪಿ ಹಾಗೂ ಜೆಡಿಎಸ್‌ನಿಂದಲೂ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದರು. ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸಿದ್ದರು.
ಲೋಕೇಶ್ವರ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನಡೆಸಿದ್ದ ಸಂಧಾನ ಕೈಕೊಟ್ಟಿದೆ. ಇತ್ತೀಚೆಗಷ್ಟೇ ಲೋಕೇಶ್ವರ ಹಾಗು ಅವರ ಬೆಂಬಲಿಗರ ಸಭೆ ನಡೆಸಿದ್ದರು. ಆದರೆ, ಸ್ಥಳೀಯ ಶಾಸಕ ಕೆ.ಷಡಕ್ಷರಿ ಅವರ ಮುನಿಸು ಪಕ್ಷ ತೊರೆಯುವಂತೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ನೀಡಿರುವ ಲೋಕೇಶ್ವರ ಮಾಧ್ಯಮಗಳಿಗೆ ಅದನ್ನು ಬಿಡುಗಡೆಗೊಳಿಸಿದ್ದಾರೆ. ಮುಂದಿನ ರಾಜಕೀಯ ತೀರ್ಮಾನ ಶೀಘ್ರದಲ್ಲಿಯೇ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.