

ತುಮಕೂರು: ಇತ್ತೀಚೆಗಷ್ಟೇ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶುಕ್ರವಾರ ತುಮಕೂರು ಸೇರಿದಂತೆ ಜಿಲ್ಲೆಯ ಎಲ್ಲಾ 11 ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು, ನಿವೇಶನ ನೋಂದಣಿ, ಖಾತೆ ಬದಲಾವಣೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಲಂಚದ ಬೇಡಿಕೆ, ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷಿ$್ಮನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ತುಮಕೂರು, ಕುಣಿಗಲ್, ಹುಲಿಯೂರುದುರ್ಗ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಸಿರಾ ಹಾಗೂ ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಚೇರಿಯ ಅಗತ್ಯ ದಾಖಲಾತಿಗಳ ತಪಾಸಣೆ ನಡೆಸಿದರು, ಈ ಸಂದರ್ಭದಲ್ಲಿ ಮಧ್ಯವರ್ತಿಗಳು ಕಚೇರಿಯಿಂದ ದೂರ ಉಳಿದರು.
ಜಿಲ್ಲಾ ಕೇಂದ್ರ ತುಮಕೂರು ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದು, ಕಳೆದ 3 ತಿಂಗಳಿನಿಂದ ಒಂದು ಇಸಿ(ಋಣಭಾರ ಪತ್ರ) ತೆಗೆದುಕೊಳ್ಳುವುದಕ್ಕೆ ಮೂರು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇವತ್ತು ನೀವು ಬಂದಿದ್ದೀರಾ ಅಂತ ಸಲೀಸಾಗಿ ಇಸಿ ಕೊಟ್ಟಿದ್ದಾರೆ. ಒಂದು ಇಸಿ ಕೊಡಲು ಮೂರು ತಿಂಗಳು ಬೇಕಾ ಸರ್ ಎಂದು ಲೋಕಾಯುಕ್ತ ಅಧಿಕಾರಿಗಳನ್ನು ರೈತನೊಬ್ಬರು ಪ್ರಶ್ನಿಸಿದರು.
ನಾನು ದಲ್ಲಾಳಿಗಳ ಕಡೆಯಿಂದ ಹೋಗಿದ್ದರೆ ಒಂದೇ ದಿನಕ್ಕೆ ಇಸಿ ಸಿಕ್ಕಿರೋದು, ನಾನು ನೇರವಾಗಿ ಹೋಗಿದ್ದಕ್ಕೆ ಮೂರು ತಿಂಗಳು ಮಾಡಿದ್ದಾರೆ ಎಂದು ರೈತ ಆಂಜಿನಪ್ಪ ಲೋಕಾಯುಕ್ತ ಅಧಿಕಾರಿಗಳ ಬಳಿ ಅಳಲ ತೋಡಿಕೊಂಡರು.
ಕಳೆದ ಒಂದು ವಾರದ ಹಿಂದೆಯಷ್ಟೇ ಜಿಲ್ಲೆಯ 10 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದರು.