

ತುಮಕೂರು: ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನ ಅಧ್ಯಯನದ ವರದಿ ಈಗಾಗಲೇ ರಾಷ್ಟ್ರಪತಿಗಳ ಕಚೇರಿ ತಲುಪಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಇಂದು ಅಖಿಲ ಕುಂಚಿಟಿಗರ ಮಹಾಮಂಡಲ, ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕುಂಚಿಟಿಗರಿಗೆ ಒಬಿಸಿ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಅವರು, ವರದಿ ಕುಂಚಿಟಿಗರ ಪರವಾಗಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕುಂಚಿಟಿಗ ಸಮುದಾಯಕ್ಕೆ ಶಕ್ತಿ ತುಂಬಲು ಕೇಂದ್ರದ ಒಬಿಸಿ ಮೀಸಲಾತಿ ಅವಶ್ಯಕತೆ ಇದೆ ಎಂದು ಪ್ರತಿಪಾಧಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯ ಸೇರಿಸಲು ಪ್ರಧಾನಿಗೂ ಭೇಟಿ ಮಾಡಿ ಮನವಿ ಮಾಡಿದ್ದೇನೆ, ರಾಜ್ಯದ ಎಲ್ಲಾ ಸಂಸದರೂ ಜತೆಯಾಗಿ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ನವೀನ್, ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ರಂಗಹನುಮಯ್ಯ, ಗೌರವಾಧ್ಯಕ್ಷ ಪುಟ್ಟೀರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಕಸುವನಹಳ್ಳಿ ರಮೇಶ್ ಮಾತನಾಡಿದರು. ಸಮುದಾಯದ ಪ್ರಮುಖ ಮುಖಂಡರು ಇದ್ದರು.