ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ದಾಸ್ತಾನು ಕೀಟನಾಶಕ ಜಪ್ತಿ

IMG-20240814-WA0121
Published on

ತುಮಕೂರು: ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೀಟನಾಶಕವನ್ನು ದಾಸ್ತಾನು ಮಾಡಿದ್ದ ಅಂಗಡಿಯೊಂದಕ್ಕೆ ಸೇರಿದ ಮನೆಯ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ 4.32 ಲಕ್ಷ ರೂ. ಬೆಲೆಯ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.


ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಪುರ ಗ್ರಾಮದ ಟಿ.ಬಿ. ಕ್ರಾಸ್‌ ಮುತ್ತುಗದಹಳ್ಳಿ ರಸ್ತೆಯಲ್ಲಿ ಇರುವ ಶ್ರೀ ಕಲ್ಲೇಶ್ವರ ಎಂಟರ್ ಪ್ರೈಸಸ್‌ರವರು ಕೀಟನಾಶಕವನ್ನು ಪರವಾನಗಿ ಇಲ್ಲದೆ ದಾಖಲಾತಿ ನಿರ್ವಹಣೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾಗೃತ ಕೋಶದ ರೇಣುಕಪ್ರಸನ್ನ ನೇತೃತ್ವದಲ್ಲಿ ತುಮಕೂರು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ, ಅಶ್ವತ್ಥ್‌ನಾರಾಯಣ, ಸಹಾಯಕ ಕೃಷಿ ನಿರ್ದೇಶಕಿ ಪೂಜಾ, ಸೌಭಾಗ್ಯ ರವರನ್ನೊಳಗೊಂಡ ತಂಡ ದಾಳಿ ಮಾಡಿ ಈ ಅಕ್ರಮ ಕೀಟನಾಶಕ ದಾಸ್ತಾನನ್ನು ಪತ್ತೆಹಚ್ಚಿ ಜಪ್ತಿ ಮಾಡಿದೆ.


ಅಕ್ರಮವಾಗಿ 3333.5 ಕೆ.ಜಿ.ಯ 59 ಬ್ಯಾಗ್ ಮತ್ತು 40 ಬಾಕ್ಸ್‌ಗಳಲ್ಲಿ ತುಂಬಿದ ಪ್ಯಾಕೇಟ್‌ಗಳ ಕೀಟನಾಶಕವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 4.32 ಲಕ್ಷ ರೂ. ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net