ಎಂಪಿ ಎಲೆಕ್ಷನ್ ನಂತರ ರಾಜಕೀಯದಲ್ಲಿ ಬದಲಾವಣೆ: ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್

KNR_Param
Published on

ತುಮಕೂರು: ಲೋಕಸಭೆ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಬದಲಾವಣೆ ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಆಗುವುದಿಲ. ಈ ಬಗ್ಗೆ ರಾಜ್ಯದ ವಿದ್ಯಮಾನ ಗಮನಿಸಿ ಜನರ ಹಿತದೃಷ್ಠಿಯಿಂದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸುವುದನ್ನು ಮರೆಯಲಿಲ್ಲ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಮುಂದಿನ ಲೋಕಸಭೆ ಚುನಾವಣೆವರೆಗೂ ಯಾವುದೇ ಸ್ಥಿತ್ಯಂತರವಿಲ್ಲ ಆದರೆ, ನಂತರ ಬದಲಾವಣೆ ಆಗುವ ಸಾಧ್ಯತೆಯಿದೆ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ನೇವೇಕೆ ಮಂತ್ರಿಗಳಾಗಬೇಕು, ಸೈರನ್‌ಹಾಕಿಕೊಂಡು ಕಾರಿನಲ್ಲಿ ಓಡಡಲು ಮಂತ್ರಿಗಳಾಗಿಲ್ಲ, ಪಕ್ಷಕ್ಕೆ ಬಲ ತರಬೇಕು ಎಂದು ಸಂದೇಶ ರವಾನಿಸಿದರು.

ಮಂತ್ರಿ, ಡಿಸಿಎಂ ಮಾಡುವುದು ಸಧ್ಯಕ್ಕೆ ನಮ್ಮ ಗುರಿ ಅಲ್ಲ, ಸ್ಥಾನಪಲ್ಲಟದ ಬಗ್ಗೆ ಈಗ ಚರ್ಚೆ ನಡೆದಿಲ್ಲ. ಆದರೆ, ರಾಜಕೀಯ ಎಂದೂ ನಿಂತ ನೀರಲ್ಲ, ಚುನಾವಣೆ ನಂತರ ಬದಲಾವಣೆ ಆಗಬಹುದು, ಹೀಗೆ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದರು.

ಎರಡೂವರೆ ವರ್ಷದ ನಂತರ ಸಚಿವ ಸಂಪುಟದಲ್ಲಿ ಬೇರೆಯವರಿಗೆ ಅವಕಾಶ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂಬ ಶಾಸಕ ಅಶೋಕ ಪಟ್ಟಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಣ್ಣ, ಅವರಿಗೆ ಭರವಸೆ ನೀಡಿರುವ ಬಗಗೆ ನನಗೆ ಗೊತ್ತಿಲ್ಲ ಆದರೆ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಏನು ಬೇಕಾದರೂ ಆಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net