

ತುಮಕೂರು: ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಲೋಕಸಭೆ ಟಿಕೆಟ್ ನೀಡಿರುವುದು ನಮಗೂ ಖುಷಿ ನೀಡಿದ್ದು, ಜಿಲ್ಲೆಯಲ್ಲಿ ಒಳ್ಳೆಯವರು ಎಂಬ ಹೆಸರಿಗೆ ಗೆಲ್ಲುವ ಅವಕಾಶವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತುಮಕೂರು ಹಾಗೂ ಹಾಸನ ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ, ಯುವ ಮತದಾರರನ್ನು ಸೆಳೆಯಲು ತಂತ್ರಗಾರಿಕೆಯನ್ನು ನಾವೂ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ಮುದ್ದಹನುಮೇಗೌಡ ಅವರು ಒಳ್ಳೆಯವರು ಎಂದು ಎಲ್ಲಾ ಜನರ ಅಭಿಪ್ರಾಯವಾಗಿದ್ದು ಸಂಸದರಾಗಿದ್ದಾಗಲೂ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ಸಂಸತ್‌ನಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ ಹಾಗಾಗಿ, ಅವರ ಪರವಾಗಿ ಜನರು ನಿಲ್ಲುತ್ತಾರೆ ಎಂದರು.
ರಾಜಕೀಯ ಪಕ್ಷದಲ್ಲಿ ಸೀಟು ಘೋಷಣೆಯಾಗುವವರೆಗೂ ವಿರೋಧ ಸಹಜ ಆದರೆ, ಒಮ್ಮೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದ ಎಲ್ಲರೂ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಯಾವುದೇ ವಿರೋಧವಿಲ್ಲ, ಟಿಕೆಟ್ ಕೈತಪ್ಪಿದವರಿಗೆ ಬೇಸರವಾಗಿರಬಹುದಷ್ಟೇ ಎಂದರು.