

ಹುಳಿಯಾರು: ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರವನ್ನು ತನಿಖೆಗೆ ಒಪ್ಪಿಸಬೇಕು ಹಾಗೂ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರನ್ನು ಸಹಕಾರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕಿನಲ್ಲಿ ಬಹುಕೋಟಿ ರೂ. ಅವ್ಯವಹಾರ ಆಗಿದೆ. ಇದಕ್ಕೆ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಸೂಪರ್ ಸೀಡ್ ಮಾಡಿದ್ದು ನಿದರ್ಶನವಾಗಿದೆ. ಅಲ್ಲದೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ರಾಜಣ್ಣ ಅವರ ಮೇಲೆ ಗಂಭೀರ ಆರೋಪ ಮಾಡಿದ್ದು ಇದನ್ನು ಪುಷ್ಠಿಕರಿಸುತ್ತದೆ. ಹಾಗಾಗಿ ರೈತರ ಹಣಕಾಸಿನ ವಹಿವಾಟು ನಡೆಯುತ್ತಿರುವ ಡಿಸಿಸಿ ಬ್ಯಾಂಕ್ ತನಿಖೆಗೆ ಒಳಪಡಸಿ ಅನ್ನದಾತನಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕೆ.ಎನ್.ರಾಜಣ್ಣ ಯಾವುದೇ ಸಭೆ, ಸಮಾರಂಭ ಮಾಡಿದರೂ ರೈತರಿಗೆ ಸಾಲಕೊಡಿಸುವ ಭರವಸೆ ನೀಡಿ ಜನ ಸೇರಿಸುತ್ತಾರೆ. ಆದರೆ, ಐದಾರು ವರ್ಷಗಳು ಅಗತ್ಯ ದಾಖಲಾತಿಗಳನ್ನಿಟ್ಟುಕೊಂಡು ರೈತರು ಬ್ಯಾಂಕ್‌ಗೆ ಅಲೆದರೂ ಸಹ ಸಾಲ ಕೊಡುವುದಿಲ್ಲ. ಸ್ವಜಾತಿ ಮತ್ತು ಹಿಂಬಾಲಕರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಪುಟ್ಟಯ್ಯ, ನೀರಾ ಈರಣ್ಣ, ಕೆಂಕೆರೆ ಬಸವರಾಜು, ಟಿ.ಎಸ್.ಹಳ್ಳಿ ಶಿವಣ್ಣ, ಕಾಫಿಪುಡಿ ಹನುಮಂತರಾಜು, ಹೂವಿನ ತಿಮ್ಮಯ್ಯ, ಕೆಂಕೆರೆ ಗೊಲ್ಲರಹಟ್ಟಿ ಪೆದ್ದಾಬೋವಿ, ಮೆಕ್ಯಾನಿಕ್ ಜಗದೀಶ್, ತಮ್ಮಡಿಹಳ್ಳಿ ಗೊಲ್ಲರಹಟ್ಟಿ ನಿಂಗಪ್ಪ, ಹೊಸಹಳ್ಳಿಪಾಳ್ಯದ ಕೃಷ್ಣಮೂರ್ತಿ, ಬುಕ್ಕಾಪಟ್ಟಣ ಶಿವಣ್ಣ, ಬಸವರಾಜು ಇದ್ದರು..