

ತುಮಕೂರು: ಮೂಡಾ ಹಾಗೂ ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಉದ್ದೇಶಿಸಿರುವ ವಿಪಕ್ಷಗಳ ವಿರುದ್ಧ ಅಹಿಂದ ಅಸ್ತ್ರ ಪ್ರಯೋಗಕ್ಕೆ ಸಿಎಂ ಆಪ್ತ ಬಳಗ ಮುಂದಾಗಿದೆ.
ತುಮಕೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಸಿದ್ದರಾಮಯ್ಯ ಆಪ್ತ ಸಚಿವ ಕೆ.ಎನ್.ರಾಜಣ್ಣ, ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿಷಯವನ್ನು ರಾಜ್ಯದ ಅಹಿಂದ ಸಮುದಾಯ ಗಂಭೀರವಾಗಿ ಪರಿಗಣಿಸಿದ್ದು ವಿಪಕ್ಷಗಳು ಪಾದಯಾತ್ರೆ ನಡೆಸಿದರೆ ನಾವೂ ಕೂಡ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಹೊಸ ಬಾಂಬ್ ಸಿಡಿಸಿದರು.
ಹಗರಣಗಳ ವಿರುದ್ಧ ಸರ್ಕಾರ ಕಠಿಣ ಕ್ರಮತೆಗೆದುಕೊಂಡು ತನಿಖೆ ನಡೆಸುತ್ತಿದ್ದರೂ ಇಡಿ, ಪ್ರತಿಭಟನೆ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಗೆ ಮಸಿ ಬಳಿಯಲು ಕೇಂದ್ರ ಸರ್ಕಾರ ಪ್ರಯೋಜಿತ ಹುನ್ನಾರ ನಡೆಯುತ್ತಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕರಾಗಿದ್ದು ಬಂಗಾರಪ್ಪ ಅವರ ವಿರುದ್ಧ ಮಾಡಿದಂತೆ ಸಣ್ಣಪುಟ್ಟ ವಿಷಯಗಳನ್ನೇ ದೊಡ್ಡದು ಮಾಡಲು ಮುಂದುವರಿದ ವಿಪಕ್ಷಗಳು ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯ ಸರ್ಕಾರ ಈಗಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿದೆ, ಬಿಜೆಪಿ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಕೈಗೊಂಡಿದೆ, ನಾ ಕಳ್ಳ, ಪರರನ್ನು ನಂಬ ಎಂಬಂತೆ ವರ್ತಿಸುತ್ತಿದ್ದಾರೆ, 2011ರಲ್ಲಿ ವಿಧಾನ ಪರಿಷತ್ ನಲ್ಲಿ ಅಂದಿನ ಸಿಎಂ ಯಡಿಯೂರಪ್ಪ ನೀಡಿದ ನಡಾವಳಿಯಲ್ಲಿ ವಿಪಕ್ದೆಷಗಳ ಮುಖಂಡರ ಬಂಡವಾಳವಿದೆ, ಅದರಲ್ಲಿ ಯಾರೆಲ್ಲಾ ಸೈಟು ಪಡೆದಿದ್ದಾರೆ ಎಂಬುದು ಇದೆ ಎಂದರು.
ಪ್ರಸ್ತುತ ಆರೋಪ ಮಾಡುತ್ತಿರುವವರೇ ಮೂಡಾ ಸೈಟು ಪಡೆಯುವಲ್ಲಿ ಹೆಚ್ಚು ಫಲಾನುಭವಿಗಳಾಗಿದ್ದು ವಾಸಸ್ಥಳದ ನಕಲಿ ದಾಖಲೆಗಳನ್ನು ನೀಡಿ ಮೂಡಾದಲ್ಲಿ ನಿವೇಶನ ಪಡೆದಿದ್ದಾರೆ. ಈ ನಿವೇಶನಗಳನ್ನು ವಾಪಸ್ ನೀಡಿ ನಂತರ ಸಿಎಂ ಆರೋಪ ಮಾಡಲಿ ಎಂದು ವಿಪಕ್ಷಗಳಿಗೆ ಸವಾಲೆಸೆದರು.
ವಿಪಕ್ಷಗಳು ಪಾದಯಾತ್ರೆ ಆರಂಭಿಸಿದರೆ ಅಹಿಂದ ಸಮುದಾಯ ಪ್ರತಿಭಟನೆ ಆರಂಭಿಸಲಿದೆ, ತುಮಕೂರು ಜಿಲ್ಲೆಯಲ್ಲಿಯೇ ಈ ಪ್ರತಿಭಟನೆ ಆರಂಭವಾಗಲಿದೆ ಎಂದು ಘೋಷಿಸಿದರು.