

ತುಮಕೂರು: ಇತ್ತೀಚಿಗಿನ ರಾಜಕೀಯ ಬೆಳವಣಿಗೆಯಲ್ಲಿ ಅತ್ಯಂತ ಆತ್ಮೀಯರಾಗಿರುವ ಗೃಹ ಸಚಿವ ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಮತ್ತೊಮ್ಮೆ ಖಾಸಗಿಯಾಗಿ ನಡೆಸಿರುವ ಬ್ರೇಕ್‌ಫಾಸ್ಟ್ ಮೀಟಿಂಗ್ ಕುತೂಹಲ ಮೂಡಿಸಿದೆ.
ನಗರದ ಕ್ಯಾತಸಂದ್ರದಲ್ಲಿರುವ ಕೆ.ಎನ್.ರಾಜಣ್ಣ ಅವರ ಮನೆಗೆ ಗುರುವಾರ ಬೆಳಗ್ಗೆ ಉಪಹಾರ ಸೇವಿಸುವ ನೆಪದಲ್ಲಿ ಭೇಟಿ ನೀಡಿದ ಪರಮೇಶ್ವರ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಇಬ್ಬರೂ ಜತೆಯಾಗಿ ಕಾರ್ಯಕರ್ತರೊಬ್ಬರ ಖಾಸಗಿ ಕಾರ್ಯಕ್ರಮಕ್ಕೆ ಹಿರಿಯೂರು ಕಡೆಗೆ ಪ್ರಯಾಣ ಮುಂದುವರಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯುವುದು ಇಬ್ಬರೂ ನಾಯಕರಿಗೂ ಪ್ರತಿಷ್ಠೆಯಾಗಿರುವ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿ ಆಯ್ಕೆ, ನಿಗಮ ಮಂಡಳಿ ನೇಮಕ, ಜಾತಿಗಣತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.