

ತುಮಕೂರು: ಎಲ್ಲಿಯವರೆಗೂ ಶಾಸಕರ ಬೆಂಬಲ, ಹೈಕಮಾಂಡ್ ಆಶಿರ್ವಾದ ಇರುತ್ತದೆಯೂ ಅಲ್ಲಿಯವರೆಗೂ ಸಿದ್ದರಾಮಯ್ಯ ಅವರು ಸಿಎಂ ಆಗಿರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುನರುಚ್ಚರಿಸಿದರು.
ನಗರದಲ್ಲಿ ಬುಧವಾರ ಲೋಕಸಭೆ ಚುನಾವಣೆ ನಂತರ ಸಿಎಂ ಬದಲಾವಣೆ ವದಂತಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕೆ 5 ವರ್ಷ ಪೂರೈಸಬಾರದು ಎಂದು ಪ್ರಶ್ನಿಸಿದರು.
ಈಗಾಗಲೇ ಮೂರು ಡಿಸಿಎಂ ನೇಮಕದ ವಿಚಾರವನ್ನು ಪಕ್ಷದ ಉಸ್ತುವಾರಿ ರಂದೀಪ್‌ಸಿಂಗ್ ಸುರ್ಜೇವಾಲಾ ಅವರ ಮುಂದೆ ಪ್ರಸ್ತಾಪ ಮಾಡಿದ್ದೇವೆ, ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂದರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೂರು ಡಿಸಿಎಂ ಮಾಡುವ ಬಗ್ಗೆ ಪಕ್ಷ ಚಿಂತಿಸಿಲ್ಲ ಎಂದು ಹೇಳಿರುವ ವಿಷಯ ಮಾಧ್ಯಮಗಳಲ್ಲಿ ನಾನೂ ನೋಡಿದ್ದೇನೆ ಅದೇ ಫೈನಲ್ ಎಂದು ತಿಳಿದು ಸುಮ್ಮನಾಗಿದ್ದೇವೆ ಸಲಹೆ ನೀಡಿದ್ದೇವೆ ಅಷ್ಟೇ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.
ಜ.11ರಂದು ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಸಂದರ್ಭ ನೋಡಿಕೊಂಡು ಡಿಸಿಎಂ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸುತ್ತೇವೆ ನಂತರ ಅವರು ತೀರ್ಮಾನಿಸುತ್ತಾರೆ ಎಂದರು.
ಡಿಸಿಎಂ ಹುದ್ದೆ ಸೃಷ್ಠಿಸಿದಾಕ್ಷಣ ಯಾರದೂ ಖಾತೆಗಳೂ ಬದಲಾಗುವುದಿಲ್ಲ, ಡಿ.ಕೆ.ಶಿವಕುಮಾರ್ ಅವರ ಖಾತೆಯೂ ಬದಲಾಗುವುದಿಲ್ಲ. ಮೂರು ಡಿಸಿಎಂ ಹುದ್ದೆಗೆ ಯಾವ ಸಚಿವರೂ, ಶಾಸಕರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು.