ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಗೆ ತಾಲೀಮು

09TMK_Kho_Khooo
Published on

ತುಮಕೂರು: ಬೆಂಗಳೂರು ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿನ ಸರ್ವೋದಯ ಕ್ರೀಡಾಂಗಣ ಮದುವಣಗಿತ್ತಿಯಂತೆ ಸಿಂಗಾರಗೊಂಡು ಕ್ರೀಡಾರಸಿಕರ ಕಣ್ಮನ ಸೆಳೆಯುತ್ತಿದೆ. ಆದರೆ ಮಳೆಯ ಭೀತಿ ಎಲ್ಲರನ್ನೂ ಕಾಡುತ್ತಿದೆ.

ತುಮಕೂರು ಸರ್ವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ 11 ಜಿಲ್ಲೆಗಳಿಂದ ಈಗಾಗಲೇ 14 ಮತ್ತು 17ರ ವಯೋಮಿತಿಯ ಬಾಲಕ, ಬಾಲಕಿಯರು ಆಗಮಿಸಿದ್ದು, ಸೋಮವಾರ ತಾಲೀಮು ಕೂಡ ಆರಂಭಿಸಿದ್ದಾರೆ.

ಭಾನುವಾರ ರಾತ್ರಿ ಸುರಿದ ಮಳೆ ಸಂಘಟಕರು ಮತ್ತು ಕ್ರೀಡಾಪಟುಗಳನ್ನು ಕೊಂಚ ಚಿಂತೆಗೂದೂಡಿದೆ. ಸೋಮವಾರ ರಾತ್ರಿ ಕೂಡ ಮಳೆಸುರಿದರೆ, ಮಂಗಳವಾರ ಬೆಳಿಗ್ಗೆ ಪಂದ್ಯಗಳು ತಡವಾಗಿ ಆರಂಭವಾಗುವ ಸಾಧ್ಯತೆಗಳಿವೆ.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಂ.ಬಿ.ಪರಮೇಶ್ವರಪ್ಪ ವ್ಯವಸ್ಥಾಪಕರ ಸಭೆ ನಡೆಸಿ ನಾಳಿನ ಪಂದ್ಯಾವಳಿಯ ರೂಪರೇಷೆಗಳನ್ನು ತಿಳಿಸಿದರು. ಸಂಚಾಲಕ ರಮೇಶ್ ಕ್ರೀಡಾಕೂಟದ ವ್ಯವಸ್ಥೆ ಮತ್ತು ಪಂದ್ಯಗಳ ಮಾಹಿತಿ ನೀಡಿದರು.

ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ಆರು ಅಂಕಣಗಳಲ್ಲಿ ಪಂದ್ಯಗಳು ಪ್ರಾರಂಭವಾಗುತ್ತವೆ, ವ್ಯವಸ್ಥಾಪಕರು ತಡ ಮಾಡದೆ ತಂಡದ ಆಟಗಾರರನ್ನು ಸರಿಯಾದ ಸಮಯಕ್ಕೆ ಕರೆ ತರುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಟಪಿಇಒ ಶಮಂತ, ಚಂದ್ರಮ್ಮ, ಕೇಶವಮೂರ್ತಿ, ಜಿಲ್ಲಾ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುರೇಶ್, ರಾಜ್ಯ ಸಂಘದ ಪ್ರಭು, ತಾಲ್ಲೂಕು ಸಂಘದ ಅಧ್ಯಕ್ಷ ಗಂಗಾಧರಯ್ಯ, ಅನಂತ ಪದ್ಮ ರಾಜ್, ತಿಪಟೂರು ತಾಲೂಕಿನ ಸತೀಶ್ ಮತ್ತಿತರರು ಇದ್ದರು.

ಅ.12ರಂದು ಗುರುವಾರ ಮತ್ತು ಶುಕ್ರವಾರ ರಾಜ್ಯ ಮಟ್ಟದ ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net