

ತುಮಕೂರು: ಕವಿ ಕೆ.ಬಿ.ಸಿದ್ದಯ್ಯ ಅವರ ಕಾವ್ಯಕ್ಕೆ ಕನ್ನಡ ವಿಮರ್ಶಾ ಪ್ರಪಂಚ ಸರಿಯಾದ ನ್ಯಾಯವನ್ನು ಒದಗಿಸಿಲ್ಲ, ಅವರ ಕಾವ್ಯವನ್ನು ಮುಟ್ಟುವುದೂ ಬಹಳ ಕಷ್ಟ ಎಂದು ಹಿರಿಯ ಲೇಖಕ ಡಾ.ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ.ಗೆಳೆಯರ ಬಳಗದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯ ಅವರ ಹಸ್ತಪ್ರತಿ ಮತ್ತು ಮುದ್ರಣದ `ತೊಗಲ ಮಂಟಪ' ಖಂಡಕಾವ್ಯ ಬಿಡುಗಡೆಗೊಳಿಸಿ ಮಾತನಾಡಿದರು.
ಕೆ.ಬಿ.ಸಿದ್ದಯ್ಯನವರ ಕಾವ್ಯದ ಮಾರ್ಗ ಪ್ರಾರಂಭದಿಂದಲೇ ಭಿನ್ನಮಾರ್ಗವನ್ನು ಹಿಡಿದ್ದನ್ನು ನಾವೆಲ್ಲ ಗುರುತಿಸಬಹುದು. ಇವರ ಕಾವ್ಯದ ಬಗ್ಗೆ ವಿಮರ್ಶಕರು ನಿರ್ಲಕ್ಷ, ಅಸಡ್ಡೆ ತೋರಿದರು ಎಂದು ವಿಷಾದಿಸಿದರು.
ಕೆ.ಬಿ.ಸಿದ್ದಯ್ಯನವರ ಕಾವ್ಯಕ್ಕೆ ಸರಿಯಾದ ವಿಮರ್ಶೆಯನ್ನು ಬರೆದು ನ್ಯಾಯವನ್ನು, ಪ್ರೀತಿಯನ್ನು, ಗೌರವ ಒದಗಿಸಿದ್ದು ವಿಮರ್ಶಕ ಡಾ.ರವಿಕುಮಾರ ನೀಹ ಮಾತ್ರ. ಸಿದ್ದಯ್ಯನವರ ಕಾವ್ಯದ ಬಗ್ಗೆ ಹೆಚ್ಚು ಆಸಕ್ತಿಯಿಂದ ಪುಸ್ತಕವನ್ನೇ ಬರೆದಿದ್ದ ಅ. ಆ ಪುಸ್ತಕ ಕನ್ನಡ ಸಾಹಿತ್ಯದಲ್ಲಿ ದಲಿತ ಕಾವ್ಯದ ವಿಸ್ತಾರ, ಒಳ-ಹೊರಗನ್ನು ಕುರಿತು ಬರೆದಿದ್ದು, ಅದೊಂದು ಮೈಲಿಗಲ್ಲು ಎಂದರು.
ಸಿದ್ದಯ್ಯನವರ ಕಾವ್ಯ ಸುಡುಸುಡುವ ಮಂಜುಗಡ್ಡೆಯಾಗಿದೆ ಎನ್ನುವುದಕ್ಕೆ ಕಾರಣಗಳಿವೆ. ಆದರೆ ಅವುಗಳನ್ನು ಹುಡುಕಲು ಹೋಗುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ 70-80ರ ದಶಕವನ್ನು ಬಹಳ ಮುಖ್ಯವಾಗಿ ಕಣ್ಣೆದುರಿನ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯಕ ಚಿತ್ತದೊಳಗೆ ನಿಜವಾದ ಉತ್ಕ್ರಾಂತಿ ಮಾಡಿದ ಸಂದರ್ಭ ಎಂದು ನಾವು ಭಾವಿಸಬೇಕು ಎಂದು ಹೇಳಿದರು.
ಕಾವ್ಯ ಏಕಕಾಲಕ್ಕೆ ಆಧ್ಯಾತ್ಮಿಕವೂ ರಾಜಕೀಯವೂ ಆಗಿರಬೇಕು ಎಂಬುದು ಕೆ.ಬಿ.ಸಿದ್ದಯ್ಯನವರ ನಿಲುವಾಗಿತ್ತು. ಹಾಗಾಗಿಯೇ ಅವರ ಕಾವ್ಯಕ್ಕೆ ವಿಶೇಷ ಮಹತ್ವ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಕೆ.ಬಿ.ಸಿದ್ದಯ್ಯ ಅವರ ಕಾವ್ಯವನ್ನು ಪ್ರಕಟಿಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ಡಿದಾರೆ. ತೊಗಲು ಮಂಟಪ ಕೃತಿಯನ್ನು ಸಿದ್ದಯ್ಯನವರ ಕೈಬರೆಹದ ಜೊತೆಗೆ ಮುದ್ರಣವನ್ನು ಮಾಡಿಸಿರುವುದು ಮೆಚ್ಚಬೇಕಾದ ಸಂಗತಿ ಎಂದರು.
ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕವಿ ಕೆ.ಬಿ.ಸಿದ್ದಯ್ಯ ಅವರಂಥ ಕೆಲವು ಸಾಹಿತಿಗಳು ಲೋಕವಿರೋಧಿಗಳು. ಸಾಮಾನ್ಯರು ಯೋಚಿಸಿದಂತೆ ಅವರು ಯೋಚಿಸುವುದಿಲ್ಲ, ಭಿನ್ನವಾಗಿ ಆಲೋಚಿಸುವ ವ್ಯಕ್ತಿಯಾಗಿದ್ದರು ಎಂದರು
ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ವೈದ್ಯ ಡಾ.ಬಸವರಾಜು, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಚೈತ್ರಾ, ಕೊಟ್ಟಶಂಕರ್ ಇದ್ದರು.