

ತುರುವೇಕೆರೆ: ಪಟ್ಟಣ ಬಾಣಸಂದ್ರ ರಸ್ತೆ ಭರತ್ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ನಿಲ್ಲಿಸಿ ಕ್ಯಾನ್ ಗೆ ಡೀಸೆಲ್ ತುಂಬಿಸಲು ಹೋದ ವೇಳೆ ಕಳ್ಳರು ಬೈಕ್ ನಲ್ಲಿದ್ದ 2.90 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಕೋಳಘಟ್ಟ ಗ್ರಾಮದ ವಿಶ್ವನಾಥ್ ಎಂಬುವರು ಶುಕ್ರವಾರ ಮಧ್ಯಾಹ್ನ ಬ್ಯಾಂಕ್ ನಲ್ಲಿ ಒಡವೆಗಳನ್ನು ಅಡವಿಟ್ಟು 2.90 ಲಕ್ಷ ರೂ. ಪಡೆದುಕೊಂಡು ಬೈಕ್ ಡಿಕ್ಕಿಯಲ್ಲಿ ಹಣವಿಟ್ಟು ಕಳೆದುಕೊಂಡಿದ್ದಾರೆ.
ಬಾಣಸಂದ್ರ ರಸ್ತೆಯಲ್ಲಿನ ಭರತ್ ಪೆಟ್ರೋಲ್ ಬಂಕ್ ವೊಂದರಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ತದ ನಂತರ ಬೈಕ್ ಅನ್ನು ಅಲ್ಲೇ ಸ್ವಲ್ಪ ಮುಂದೆ ನಿಲ್ಲಿಸಿ ಮತ್ತೆ ಕ್ಯಾನಿಗೆ ಡೀಸೆಲ್ ತುಂಬಿಸಿಕೊಳ್ಳಲು ಹೋಗಿದ್ದಾನೆ. ಸ್ವಲ್ಪ ಸಮಯದ ಬಳಿಕ ಡೀಸೆಲ್ ತುಂಬಿಸಿಕೊಂಡು ಬೈಕ್ ನಲ್ಲಿಟ್ಟು ಬಂಕ್ ನವರಿಗೆ ಹಣಕೊಡಲು ಬೈಕ್ನ ಡಿಕ್ಕಿ ನೋಡಿದಾಗ ತೆರೆದಿತ್ತು ಹಣ ಮಾತ್ರ ಕಳ್ಳತನವಾಗಿತ್ತು.
ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಮಾಡಿದ ಆರೋಪಿಯ ಬೈಕ್ ನಂಬರ್ ಪತ್ತೆ ಹಚ್ಚಿದ್ದು ಆರೋಪಿ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.