

ತುಮಕೂರು: ನಿರೀೆಯಂತೆಯೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಸನ ಜಿಲ್ಲಾ ಉಸ್ತುವಾರಿ ಜವಬ್ಧಾರಿಯಿಂದ ಬಿಡುಗಡೆ ಪಡೆದಿದ್ದಾರೆ, ಒಲ್ಲದ ಮನಸ್ಸಿನಿಂದಲೇ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರಬರೆದು ಹಾಸನ ಜಿಲ್ಲಾ ಉಸ್ತುವಾರಿ ಜವಬ್ಧಾರಿಯಿಂದ ಬಿಡುಗಡೆ ಮಾಡಬೇಕು ಎಂದು ರಾಜಣ್ಣ ಮನವಿ ಮಾಡಿದ್ದರು. ಆದರೆ, ಯಾವುದೇ ಜಿಲ್ಲೆಯ ಉಸ್ತುವಾರಿ ಜವಬ್ಧಾರಿ ಇಲ್ಲದ ಕೃಷ್ಣಭೈರೇಗೌಡ ಕೂಡ ಹಾಸನ ಜವಬ್ಧಾರಿ ವಹಿಸಿಕೊಳ್ಳಲು ಮೀನಾಮೇಷ ಎಣಿಸಿದ್ದರಿಂದ ತಡವಾಗಿ ಆದೇಶವಾಗಿದೆ.
ತುಮಕೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆ.ಎನ್.ರಾಜಣ್ಣ ಅವರ ಜನ್ಮದಿನೋತ್ಸವದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಮುಗಿದ ನಂತರ ಹಾಸನ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿಯೂ ಹಾಸನ ಉಸ್ತುವಾರಿಯಿಂದ ಬಿಡುಗಡೆಗೊಳಿಸಿ ಎಂದು ರಾಜಣ್ಣ ಮನವಿ ಮಾಡಿದ್ದರು. ಕೃಷ್ಣಭೈರೇಗೌಡ ಒಪ್ಪಿಕೊಳ್ಳುವವರೆಗೂ ನೀನೇ ಇರಯ್ಯ ಎಂದು ಸಿಎಂ ಸೂಚಿಸಿದ್ದರು.
ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧವೇ ರಾಜಕಾರಣ ಮಾಡಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡ ರಾಜಣ್ಣ ತಂತ್ರಗಾರಿಕೆ ಬಗ್ಗೆ ರಾಜ್ಯದೆಲ್ಲೆಡೆ ಚರ್ಚೆಗಳಾಗಿದ್ದವು. ಹಾಸನ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಲನೀಡದಂತೆ ಮಾಡುವಲ್ಲಿ ರಾಜಣ್ಣ ಯಶಸ್ವಿಯಾಗಿದ್ದರು.
ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳೆಲ್ಲರೂ ತುಮಕೂರು ಜಿಲ್ಲೆಯವರು ಎಂಬ ಅಪಖ್ಯಾತಿಯೂ ರಾಜಣ್ಣ ಅವರ ಮೇಲಿತ್ತು. ಹಾಗಾಗಿ, ಹಾಸನ ಜಿಲ್ಲೆಯ ಕಾಂಗ್ರೆಸ್ನ್ನ ಒಂದು ಗುಂಪಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರು ಹೇಳಿದ್ದು ರಾಜಣ್ಣ ಅವರನ್ನು ಕೆರಳಿಸಿತ್ತು. ಡಿ.ಕೆ.ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಸಿಎಂಗೆ ರಾಜಣ್ಣ ದೂರಿದ್ದರು ಎನ್ನಲಾಗಿದೆ.
ಹೂಡಾ ಅಧ್ಯಕ್ಷರ ನೇಮಕದಲ್ಲಿ ಜಟಾಪಟಿ! ಹಾಸನ ನಗರಾಭಿವೃದ್ಧಿ ಪ್ರಾಧಿಕಾರ(ಹೂಡಾ) ಅಧ್ಯಕ್ಷರ ನೇಮಕದ ವಿಷಯದಲ್ಲಿಯೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಚಿವ ರಾಜಣ್ಣ ನಡುವೆ ದೊಡ್ಡ ಜಟಾಪಟಿಯೇ ನಡೆದಿತ್ತು. ಹೂಡಾ ಅಧ್ಯಕ್ಷ ಸ್ಥಾನವನ್ನು ಅರಸೀಕೆರೆ ತಾಲೂಕಿನ ಕುರುಬ ಸಮುದಾಯದ ಪ್ರಮುಖ ಮುಖಂಡರೊಬ್ಬರಿಗೆ ಕೊಡಿಸಲು ಶಿವಲಿಂಗೇಗೌಡ ಶಿಪಾರಸು ಮಾಡಿದ್ದರು. ಆದರೆ, ಹಾಸನ ಕ್ಷೇತ್ರದವರಿಗೆ ಅಧ್ಯಕ್ಷ ಸ್ಥಾನ ನೀಡುವುದು ನ್ಯಾಯ ಎಂದು ರಾಜಣ್ಣ ಪಟ್ಟುಹಿಡಿದಿದ್ದು ಗುಂಪುಗಾರಿಕೆಯನ್ನೇ ಸೃಷ್ಠಿಸಿತ್ತು. ವಿವಾದ ಸಿಎಂ ಸಿದ್ದರಾಮಯ್ಯ ಅವರ ಅಂಗಳಕ್ಕೂ ತಲುಪಿ ರಾಜಿಸಂದಾನ ಕೂಡ ನಡೆದಿದ್ದು ರಾಜಣ್ಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಉಸಾಬರಿಯೇ ಬೇಡ ಎನ್ನಿಸಿತ್ತು. ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣ ನೆರವೇರಿಸುವಷ್ಟರಲ್ಲಿ ಬೇರೊಬ್ಬರಿಗೆ ಹೊಣೆ ನೀಡಬೇಕು ಎಂದು ರಾಜಣ್ಣ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಾಸನ ಉಸ್ತುವಾರಿ ಕೃಷ್ಣಭೈರೇಗೌಡ ಹೆಗಲಿಗೇರಿದೆ.
ತುಮಕೂರಿನ ಪಾಲಿಗೂ ಕೊಂಚ ಹಿನ್ನೆಡೆ: ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೂ ತುಮಕೂರಿಗೆ ನಂಟಿದೆ, ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಹಾಸನ ಜಿಲ್ಲೆಯಿಂದಲೇ ಹರಿಯಬೇಕಿದ್ದು ಸಕಾಲದಲ್ಲಿ ನೀರು ಹರಿಸುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಕೃಪೆಯೂ ಬೇಕಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರೇ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವುದರಿಂದ ತುಮಕೂರು ಜಿಲ್ಲೆಯ ಪಾಲು ಪಡೆಯಲು ಈ ಸ್ಥಾನ ಮಹತ್ವ ಪಡೆದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತುಮಕೂರು ಜತೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆದಿದ್ದ ಜೆ.ಸಿ.ಮಾಧುಸ್ವಾಮಿ ಜಿಲ್ಲೆಯ ಪಾಲಿನ ಸಂಪೂರ್ಣ ನೀರನ್ನು ಹರಿಸಿದ್ದರು. ಅದೇ ರೀತಿ ಕೆ.ಎನ್.ರಾಜಣ್ಣ ಕೂಡ ಜಿಲ್ಲೆಗೆ ಅಗತ್ಯವಾದ ಸಂದರ್ಭದಲ್ಲಿ ನೀರು ಹರಿಸುವ ಮೂಲಕ ಜಿಲ್ಲೆಯ ಪಾಲಿಗೆ ಕಾವಲುಗಾರರಾಗಿದ್ದರು. ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನ ತುಮಕೂರು ಜಿಲ್ಲೆಯಿಂದ ಕೈತಪ್ಪಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಕೊಂಚ ನಿರಾಸೆಯಾಗಿದೆ, ಆದರೆ, ಬಯಲು ಸೀಮೆಯ ಜಿಲ್ಲೆಯ ಕೃಷ್ಣಭೈರೇಗೌಡ ನೀರಿನ ಕಷ್ಟ ಅರ್ಥ ಮಾಡಿಕೊಂಡು ನ್ಯಾಯವಾಗಿ ನಡೆದುಕೊಳ್ಳಲಿದ್ದಾರೆ ಎಂಬ ಭರವಸೆಯೂ ಇದೆ.