

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲು ನಾನು ತಯಾರಿ ನಡೆಸಿದ್ದು, ವರಿಷ್ಟರಲ್ಲಿ ಟಿಕೆಟ್ ಕೇಳಿದ್ದೇನೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅಭ್ಯರ್ಥಿಯಾಗಬೇಕು ಎಂದು ವರಿಷ್ಟರಿಗೆ ಹೇಳಿದ್ದೇನೆ, ಗೆಲ್ಲುವ ಮಾನದಂಡಗಳಿಂದ ಪರಿಶೀಲಿಸಿ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದರು.
ವಿ.ಸೋಮಣ್ಣ ತುಮಕೂರು ಕ್ಷೇತ್ರದಲ್ಲಿ ಸ್ಫರ್ಧೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ, ಯಾರೂ ಬೇಕಾದರೂ ಟಿಕೆಟ್ ಕೇಳಬಹುದು ಆದರೆ, ಹೊರಗಿನವರು ಬಂದು ಜಿಲ್ಲೆಯಲ್ಲಿ ಗೆದ್ದ ಉದಾಹರಣೆ ಇಲ್ಲ ಎಂದು ಅಸಮಧಾನ ಹೊರಹಾಕಿದರು.
ತುಮಕೂರು ಕ್ಷೇತ್ರದಿಂದ ಸ್ಫರ್ಧೆಗೆ ಕೋದಂಡರಾಮಯ್ಯ ಬಂದಾಗಲೂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ಹೊರಗಿನವರನ್ನು ಜಿಲ್ಲೆಯ ಜನರು ಒಪ್ಪುವುದಿಲ್ಲ ಎಂದು, ನಂತರ ಎ.ಕೃಷ್ಣಪ್ಪ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಬಂದರೂ ಗೆಲುವು ಸಾಧ್ಯವಾಗಿಲ್ಲ ಎಂದರು ಪಕ್ಷಕ್ಕೂ ಎಚ್ಚರಿಕೆ ರವಾನಿಸಿದರು.
ಜೆಡಿಎಸ್ ಜತೆಗಿನ ಮೈತ್ರಿ ಲಾಭವಾಗುವ ಸಾಧ್ಯತೆ ಬಗ್ಗೆ ಫಲಿತಾಂಶದ ನಂತರವಷ್ಟೇ ಗೊತ್ತಾಗಲಿದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ ಫಲಿತಾಂಶ ನಮ್ಮ ಕಣ್ಣಮುಂದೆಯೇ ಇದೆ ಎಂದು ಜೆಡಿಎಸ್ ಜತೆಗಿನ ಮೈತ್ರಿಗೂ ಅಸಮದಾನ ಹೊರಹಾಕಿದರು.
ನಾಯಕರು ಒಂದಾದಾಕ್ಷಣವೇ ಹಳ್ಳಿಯಲ್ಲಿ ಜನರು ಒಂದಾಗುವ ಸಾಧ್ಯತೆಯಿಲ್ಲ, ಸ್ಥಳೀಯ ಚುನಾವಣೆಯಲ್ಲಿ ಪರಸ್ಪರ ಬಡಿದಾಡಿಕೊಂಡಿರುತ್ತಾರೆ ಹಾಗಾಗಿ, ಮೈತ್ರಿಯಿಂದ ನಮ್ಮ ಶಕ್ತಿ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು, ನಮ್ಮ ಸಾಮರ್ಥ್ಯದ ಮೇಲಷ್ಟೇ ನಾವು ನಂಬಿಕೆಯಿಡಬೇಕು ಎಂದರು.