ಮತದಾರರ ಪಟ್ಟಿಗೆ ಸೇರ್ಪಡೆಗೆ ಐಟಿಐ ಉಪನ್ಯಾಸಕರಿಗೂ ಗ್ರೀನ್ ಸಿಗ್ನಲ್

44444444444444444
Published on

ತುಮಕೂರು: ಕರ್ನಾಟಕ ವಿಧಾನ ಪರಿಷತ್‌ಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿಗೆ ರಚನೆಯಲ್ಲಿ ಮಾಡಿಕೊಂಡಿರುವ ಎಡವಟ್ಟು ಮತ್ತೊಮ್ಮೆ ಬಯಲಾಗಿದೆ.

ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಹರಲ್ಲ ಎಂದು ಅರ್ಜಿಗಳನ್ನೇ ನಿರಾಕರಿಸಿದ್ದ ಐಟಿಐ ಕಾಲೇಜು ಉಪನ್ಯಾಸಕರೂ ಮತದಾನಕ್ಕೆ ಅರ್ಹರು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯೇ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕರಡು ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಿಂದ ಹೊರಗುಳಿದಿರುವ ವಿವಿಧ ಐಟಿಐ ಕಾಲೇಜುಗಳು ಪ್ರೌಢ ಶಿಕ್ಷಣ ಮಟ್ಟಕಿಂತ ಕಡಿಮೆ ಅಲ್ಲದ ದರ್ಜೆ ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಸ್ಪಷ್ಟೀಕರಣ ಕೋರಿದ್ದರು.

ಚುನಾವಣಾ ಆಯೋಗದ ಸ್ಪಷ್ಟೀಕರಣಕ್ಕೆ ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಸ್.ರಾಜು ಉತ್ತರ ನೀಡಿದ್ದು ಐಟಿಐ ಕಾಲೇಜು ಉಪನ್ಯಾಸಕರೂ ಕರ್ನಾಟಕ ವಿಧಾನ ಪರಿಷತ್‌ಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಾಗಿದೆ.

ಜಿಲ್ಲೆಯಲ್ಲಿ 3000 ಅರ್ಜಿ ತಿರಸ್ಕೃತ!

ತುಮಕೂರು ಜಿಲ್ಲೆಯಲ್ಲಿ 9000ಕ್ಕೂ ಹೆಚ್ಚು ಆರ್ಹ ಮತದಾರರು ಅರ್ಜಿ ಸಲ್ಲಿಸಿದ್ದರೂ ಕೆಲವು ಮಾನದಂಡಗಳನ್ನು ತಪ್ಪಾಗಿ ಆರ್ಥೈಸಿಕೊಂಡು 6061 ಮತದಾರರನ್ನು ಮಾತ್ರ ಅರ್ಹರೆಂದು ಘೋಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಐಟಿಐ ಕಾಲೇಜು ಉಪನ್ಯಾಸಕರನ್ನು ಸೇರಿದಂತೆ ಜಿಲ್ಲೆಯಲ್ಲಿ ಶೇ.33ರಷ್ಟು ಮತರಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದ್ದರು. ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕು ನೀಡಬೇಕು ಎಂದು ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದು ಈ ಬಗ್ಗೆ ಜಿಲ್ಲಾಡಳಿತ ಚುನಾವಣಾ ಆಯೋಗದ ನಿರ್ದೇಶನ ಕೋರಿದೆ.

ಗೊಂದಲ ಭಗೆಹರಿಯಬೇಕಿದೆ:

ತುಮಕೂರು ನಗರದಲ್ಲಿ 2435 ಶಿಕ್ಷಕರು ಹೊಸದಾಗಿ ಅರ್ಜಿ ಸಲ್ಲಿಸಿದ್ದರೆ, ಕೇವಲ 1957 ಶಿಕ್ಷಕರಿಗೆ ಮಾತ್ರ ನೋಂದಾಯಿಸಲಾಗಿದೆ. ತುಮಕೂರು ಗ್ರಾಮಾಂತರದಲ್ಲಿ 1108 ಅರ್ಜಿಗಳ ಪೈಕಿ 532 ಅರ್ಜಿ ಮಾತ್ರ ಸ್ವೀಕರಿಸಲಾಗಿದೆ.
ಕುಣಿಗಲ್‌ನಲ್ಲಿ 445 ಅರ್ಜಿಗಳ ಪೈಕಿ 191, ತುರುವೇಕೆರೆಯಲ್ಲಿ 546ರಲ್ಲಿ 261, ಚಿಕ್ಕನಾಯಕನಹಳ್ಳಿ 660ರಲ್ಲಿ 290, ತಿಪಟೂರಿನಲ್ಲಿ 750ರ ಪೈಕಿ 497 ಮತದಾರರನ್ನು ಮಾತ್ರ ಅಂಗೀಕರಿಸಲಾಗಿದೆ. ಈ ಪೈಕಿ ಐಟಿಐ ಕಾಲೇಜುಗಳ ಉಪನ್ಯಾಸಕರ ಸೇರ್ಪಡೆಗೆ ಇದ್ದ ಗೊಂದಲ ಭಗೆಹರಿದಿದ್ದು ಇನ್ನುಳಿದವರ ಗೊಂದಲ ಭಗೆಹರಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net