

ತುಮಕೂರು: ಜಿಲ್ಲೆಯಲ್ಲಿ ಡೆಂಘೆ, ಮಲೇರಿಯಾ, ಚಿಕುನ್‌ಗುನ್ಯಾ ಪ್ರಕರಣ ಹೆಚ್ಚಾಗುತ್ತಿದ್ದು ಜನರು ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೋಗ ನಿಯಂತ್ರಣಕ್ಕೆ ತರಲು ಸ್ವಚ್ಛತೆ, ಫಾಗಿಂಗ್ ಮಾಡುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಲು ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಆರೋಗ್ಯ ಇಲಾಖೆ ವರದಿಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ 240 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 114 ಸೇರಿ 354 ಡೆಂಘೆ ಪ್ರಕರಣ ವರದಿಯಾಗಿವೆ, ರೋಗಿಗಳ ರಕ್ತ ಪರೀಕ್ಷೆ ವರದಿ ಬಂದ ನಂತರ ದೃಢಪಡಲಿದೆ. ಜಿಲ್ಲೆಯಲ್ಲಿ ಈವರೆಗೆ 70 ಚಿಕುನ್‌ಗುನ್ಯಾ ಪ್ರಕರಣ ವರದಿಯಾಗಿವೆ. ವೈರಲ್ ಜ್ವರ ಪ್ರಕರಣಗಳೂ ಸಹ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ನಿರ್ಲಕ್ಷö್ಯ ತೋರದೆ ಜ್ವರ ಕಂಡು ಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು ಎಂದರು.
ಸಾರ್ವಜನಿಕರು ತಮ್ಮ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಪ್ರಕರಣಗಳು ಹೆಚ್ಚುವ ಸಂಭವವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಿಕೊಂಡು ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ಕೇಂದ್ರವನ್ನು ತೆರೆಯಲು ನಿರ್ದೇಶನ ನೀಡಲಾಗಿದೆಯಲ್ಲದೆ ಟ್ರಾಮಾಕೇರ್ ಸೆಂಟರ್‌ನಲ್ಲಿ ರಕ್ತ ಪರೀಕ್ಷೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಎಚ್‌ಒ ಡಾ.ಮಂಜುನಾಥ್ ಇದ್ದರು.