ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

INC
Published on

ತುಮಕೂರು:ದೇಶದಲ್ಲಿ 2024ರ ಲೋಕಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಮತಗಳ್ಳತನ ಆಗಿರುವುದನ್ನು ಖಂಡಿಸಿ,ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ದ ಓಟ್ ಚೋರ್-ಗಾಡಿ ಚೋಡ್ ಎಂಬ ಘೋಷಣೆಯೊಂದಿಗೆ ನಗರದ ಟೌನ್‌ಹಾಲ್ ವೃತ್ತದಲ್ಲಿ ಜಿಲ್ಲಾಕಾಂಗ್ರೆಸ್ ವತಿಯಿಂದ ಕ್ಯಾಂಡಲ್ ಮಾರ್ಚ್ ಕೈಗೊಳ್ಳಲಾಗಿತ್ತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ನೇತೃತ್ವದಲ್ಲಿ ತುಮಕೂರು ನಗರ ಕಾಂಗ್ರೆಸ್ ಬ್ಲಾಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಟೌನ್‌ಹಾಲ್ ಮುಂಭಾಗದಲ್ಲಿ ಮೆಣದ ಬತ್ತಿ ಹಿಡಿದು ಕೇಂದ್ರ ಮತ್ತು ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿದರು.

ಜಿ.ಚಂದ್ರಶೇಖರಗೌಡ ಮಾತನಾಡಿ, ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದನ್ನು ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರು ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ.ಅಲ್ಲದೆ ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳ ವಿಧಾನಸಭೆ ಚುನಾವಣೆಯ ವೇಳೆಯೂ ಮತಗಳ್ಳತನ ಆಗಿರುವುದನ್ನು ಬಹಿರಂಗಗೊಳಿಸಿದ್ದಾರೆ ಎಂದರು.

ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಮತಗಳ್ಳತನ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನತೆ ತಿಳಿಸುವ ನಿಟ್ಟಿನಲ್ಲಿ ಈ ಕ್ಯಾಂಡಲ್ ಮಾರ್ಚ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಮಾತನಾಡಿ,ನಮ್ಮ ನಾಯಕರಾಗಿರುವ ರಾಹುಲ್‌ಗಾಂಧಿಯವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಬಿಜೆಪಿಯ ಷಡ್ಯಂತ್ರವನ್ನು ಬಯಲಿಗೆ ಎಳೆದಿದ್ದಾರೆ. ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಇಂದು ಈ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಮತಗಳ್ಳತನದ ಮೂಲಕ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಪ್ರಭು. ಇಂತಹ ಮತದಾರ ಪ್ರಭುವಿನ ಜನಾಭಿಪ್ರಾಯವನ್ನು ತಿರುಚಿ,ಮತಗಳ್ಳತನದ ಮೂಲಕಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ.ಕೆಪಿಸಿಸಿ ಅಧ್ಯಕ್ಷರ ಕರೆಯ ಮೇರೆಗೆ ಕ್ಯಾಂಡಲ್ ಮಾರ್ಚ ಆಯೋಜಿಸಿದ್ದೇವೆ. ಕರ್ನಾಟಕದ ಸೆಂಟ್ರಲ್ ಲೋಕಸಭಾ ಕ್ಷೇತ್ರ ಹಾಗೂ ದೇಶದ ವಾರಣಾಸಿ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆಗಳಲ್ಲಿ ಮತಗಳ್ಳತನ ನಡೆಸಿರುವುದು ಸಾಭೀತಾಗಿದೆ.ಇದು ಸಂವಿಧಾನವನ್ನೇ ತೆಗೆಯುವ ಪ್ರಯತ್ನವಾಗಿದೆ. ಇದರ ವಿರುದ್ದ ದೇಶದ ಜನರು ಹೋರಾಟ ನಡೆಸಬೇಕಾಗಿದೆ.ಈ ರೀತಿಯ ಕಳ್ಳತನದ ಮೂಲಕ ಅಧಿಕಾರ ಹಿಡಿಯಲು ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫಯಾಜ್,ಮುಖಂಡರಾದ ಷಣ್ಮುಖಪ್ಪ,ಅಸ್ಲಾಂಪಾಷ,ಸುಜಾತ,ವಸುಂದರ, ಕವಿತಾ,ನಾಗಮಣಿ, ಮಾರುತಿ, ಕೆಂಪರಾಜು, ಕೊಡಿಯಾಲ ಮಹದೇವ್,ಸೌಭಾಗ್ಯ, ಲೋಕೇಶ್ ಸ್ವಾಮಿ, ಪಿ.ಶಿವಾಜಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ, ರೇವಣಸಿದ್ದಯ್ಯ,ಫ್ಹರಾನಾ ಬೇಗಂ, ಸೌಭಾಗ್ಯ, ಭಾಗ್ಯ, ಮಂಗಳ, ಯಶೋಧ,ಸಾಹೇರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net