ಬೆಂಗಳೂರಿನಲ್ಲಿ ಕೈ ನಾಯಕರ ಹೈ ಓಲ್ಟೇಜ್ ಸಭೆ; ಅಭ್ಯರ್ಥಿ ಘೋಷಣೆ ಹೊಣೆ ಪರಮ್ ಹೆಗಲಿಗೆ!

INC1
Published on

ತುಮಕೂರು: ತುಮಕೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸುವ ಹೊಣೆಯನ್ನು ಡಾ.ಜಿ.ಪರಮೇಶ್ವರ್ ಹೆಗಲಿಗೆ ವಹಿಸಲಾಗಿದೆ.

ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ನಡೆದಿರುವ ಮಹತ್ವದ ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು ಭಾಗವಹಿಸಿದ್ದು ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ.

ಎಐಸಿಸಿ ಚುನಾವಣಾ ಸಮಿತಿ ಸಂಭವನೀಯ ಅಭ್ಯರ್ಥಿಗಳನ್ನು ಕಳುಹಿಸಲು ದಿನಗಣನೆ ಆರಂಭವಾಗಿದ್ದು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಭ್ಯರ್ಥಿಯ ಹೆಸರುಗಳನ್ನು ಕೆಪಿಸಿಸಿ ಮೂಲಕ ದೆಹಲಿಗೆ ಕಳುಹಿಸಲು ನಿರ್ಧರಿಸಲಾಗಿದೆ.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಖುದ್ದು ಡಾ.ಜಿ.ಪರಮೇಶ್ವರ್ ಅವರೇ ವಿಷಯ ಪ್ರಸ್ತಾಪಿಸಿದ್ದು ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿಯೇ ಮಾತಿಗಳಿದ ಸಚಿವ ಕೆ.ಎನ್.ರಾಜಣ್ಣ ಕೂಡ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಅನಿವಾರ್ಯ ಎಂಬುದನ್ನು ಮುಖಂಡರಿಗೆ ಮನದಟ್ಟು ಮಾಡಿದ್ದು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಹೇಳಿಕೆ ನೀಡದಂತೆ ಸೂಚನೆ ನೀಡಿದರು ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಪ್ರಮುಖ ಮುಖಂಡರು ಭಾಗವಹಿಸಿ ಅಭಿಪ್ರಾಯ ಹಂಚಿಕೊAಡಿದ್ದು ಅಂತಿಮ ತೀರ್ಮಾನದ ಅಧಿಕಾರವನ್ನು ಡಾ.ಜಿ.ಪರಮೇಶ್ವರ ಅವರಿಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net