ಶಿರಾಗೇಟ್ ವಾಣಿಜ್ಯಮಳಿಗೆಗೆ ವಿದ್ಯುತ್ ಸಂಪರ್ಕವೇ ಇಲ್ಲ!

HL
Published on

ಕೇಳೊರಿಲ್ಲ ಬಾಡಿಗೆದಾರರ ಗೋಳು, 64 ಮಳಿಗೆಗಳಲ್ಲಿಯೂ ವ್ಯಾಪಾರವಿಲ್ಲ

ಸೋರಲಮಾವು ಶ್ರೀಹರ್ಷ
ತುಮಕೂರು: ನಗರದ ಶಿರಾ ಗೇಟ್‌ನಲ್ಲಿ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿರುವ 64 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿ ವರ್ಷಗಳೇ ಕಳೆದಿದ್ದರೂ ವಿದ್ಯುತ್ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ.

ಸಣ್ಣಪುಟ್ಟ ಹರಾಜಿನಲ್ಲಿ ಮಳಿಗೆಯನ್ನು ಪಡೆದು ವ್ಯಾಪಾರ ಆರಂಭಿಸಲು ಕಾದಿದ್ದರೂ ಪಾಲಿಕೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ, ನಿರ್ಮಾಣ ಸಮಯದಲ್ಲಿ ಕಲ್ಪಿಸಿದ್ದ ವೈರಿಂಗ್ ಸಂಪೂರ್ಣ ಹಾಳಾಗಿದ್ದು ಎಲ್ಲಿ ವಿದ್ಯುತ್ ಬರುತ್ತಿದೆ ಎಂಬುದೇ ತಿಳಿಯದಂತಾಗಿದೆ.

ಯಾವುದೇ ಮೂಲಸೌಕರ್ಯವಿಲ್ಲದೆ ಮಳಿಗೆಗಳನ್ನು ಬಾಡಿಗೆಗೆ ನೀಡಿರುವ ಪಾಲಿಕೆ ಸಿಬ್ಬಂದಿ ಮಾತ್ರ ಮಾಸಿಕವಾಗಿ ಬಾಡಿಗೆ ವಸೂಲಿಯನ್ನು ಮಾಡುತ್ತಲೇ ಇದ್ದಾರೆ, ವಿದ್ಯುತ್ ಇಲ್ಲದ ಕಾರಣಕ್ಕೆ ಬಾಡಿಗೆಯಲ್ಲಾದರೂ ವಿನಾಯಿತಿ ನೀಡುವಂತೆ ಬಾಡಿಗೆದಾರರು ಮಾಡಿಕೊಂಡು ಮನವಿಗೂ ಪಾಲಿಕೆ ಸೊಪ್ಪು ಹಾಕಿಲ್ಲ.

ಮಹಾನಗರ ಪಾಲಿಕೆಯ ವಿಶಾಲ ಜಾಗದಲ್ಲಿ ನಿರ್ಮಿಸಿದ್ದ ಮಳಿಗೆಗಳು ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲವಾಗುತ್ತಿವೆ. ಕಟ್ಟಡದ ಬಾಡಿಗೆ ಹುಟ್ಟಿಸಿಕೊಳ್ಳಲು ಕೆಲವರು ವ್ಯಾಪಾರ ಆರಂಭಿಸಿದ್ದರೂ ಸಂಜೆಯಾಗುತ್ತಲೇ ಬಾಗಿಲು ಮುಚ್ಚುವ ಸ್ಥಿತಿಯಿದೆ. ವಿದ್ಯುತ್ ಬಳಸಿ ಮಾಡಬಹುದಾದ ವ್ಯಾಪಾರ ಇಲ್ಲಿ ಸಾಧ್ಯವಿಲ್ಲ.

ವಾಣಿಜ್ಯ ಸಂಕಿರ್ಣದ ಆವರಣವೀಗ ಪಾರ್ಕಿಗ್ ಲಾಟ್ ಆಗಿದ್ದು ಶಿರಾ ಗೇಟ್‌ನಿಂದ ಬಸ್‌ಗೆ ತರಳುವ ಸಾವಿರಾರು ಪ್ರಾಯಾಣಿಕರು ಇಲ್ಲಿ ದ್ವಿಚಕ್ರವಾಹನಗಳಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ, ಸಂಜೆಯಾಗುತ್ತಲೇ ಇಲ್ಲಿ ವಿದ್ಯುತ್ ಇಲ್ಲದೆ ಸ್ಮಶಾನಮೌನ ಆವರಿಸುತ್ತಿದ್ದು, ಮದ್ಯಪಾನಿಗಳು, ಅನೈತಿಕ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

ಹಿಂಬರಹ ಕೊಟ್ಟು ಸುಮ್ಮನಾದ ಪಾಲಿಕೆ:

ವಾಣಿಜ್ಯ ಮಳಿಗೆಗಳ ಸಮಸ್ಯೆಗಳ ಬಗ್ಗೆ ಕಳೆದ ಮೂರು ವರ್ಷದಿಂದಲೂ ಮೇಯರ್, ಆಯುಕ್ತರು, ಸದಸ್ಯರು, ಇಂಜಿನಿಯರ್‌ಗಳು ಸೇರಿದಂತೆ ಸಂಬAಧಪಟ್ಟವರಿಗೆಲ್ಲಾ ಲಿಖಿತವಾಗಿ ಮನವಿಯನ್ನು ಇಲ್ಲಿನ ವ್ಯಾಪಾರಿಗಳು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಆಯೋಜಿಸಿದ್ದ ಜನತಾದರ್ಶನದಲ್ಲಿಯೂ ಮನವಿ ಮಾಡಿದ್ದು, 30 ಲಕ್ಷ ರೂ. ವೆಚ್ಚದಲ್ಲಿ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಪಾಲಿಕೆ ಇಂಜಿನಿಯರ್ ಹಿಂಬರಹ ನೀಡಿ ಸುಮ್ಮನಾಗಿದ್ದಾರೆ.

ಕಳೆದ 10 ವರ್ಷದಿಂದ ಕೋರಿಯರ್ ಸೇವೆಯನ್ನು ಮಾಡಿಕೊಂಡಿದ್ದು ಯಾವುದೇ ಮೂಲಭೂತ ಸೌಕರ್ಯವಿಲ್ಲ, ವಿದ್ಯುತ್ ಸಂಪರ್ಕಕ್ಕಾಗಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸಂಜೆಯಾದೊಡೆ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ, ಬೆಳಗ್ಗೆಯಾದರೆ ಮದ್ಯದ ಖಾಲಿ ಬಾಟಲಿ ಬಿದ್ದಿರುತ್ತವೆ, ಮಲ, ಮೂತ್ರ ವಿಸರ್ಜನೆ ಮಾಡಿರುತ್ತಾರೆ. ಪಾಲಿಕೆ ಹೊಣೆಗಾರಿಕೆ ಮರೆತಿದೆ.
ಜಯಶೀಲಾ
ಬಾಡಿಗೆದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net