

ತುಮಕೂರು: ಸತತ ಐದು ಭಾರಿ ಗೆದ್ದು ಜಿಲ್ಲೆಯ ಯಶಸ್ವಿ ರಾಜಕಾರಣಿ ಎಂಬ ಹೆಗ್ಗಳಿಕೆ ಹೊಂದಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ನಿರೀಕ್ಷೆಯಂತೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಕಾAಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಣ್ಣ ಕೈಗಾರಿಕೆ ಇಲಾಖೆಗಳ ಸಚಿವರಾಗಿಯೂ ಶ್ರೀನಿವಾಸ್ ಕೆಲಸ ಮಾಡಿದ್ದು 2023ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು.
ಜಿಲ್ಲೆಯಲ್ಲಿ ಈಗಾಗಲೇ ಇಬ್ಬರಿಗೆ ಸಚಿವ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಮತ್ತೊಬ್ಬರು ಸಚಿವರಾಗುವ ಸಾಧ್ಯತೆ ಇಲ್ಲದ ಕಾರಣಕ್ಕೆ ನಿಗಮದಲ್ಲಿ ಸ್ಥಾನ ನೀಡಲಾಗಿದೆ. ತಿಪಟೂರು ಶಾಸಕ ಕೆ.ಷಡಕ್ಷರಿಗೂ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಈಗಾಗಲೇ ರಾಜ್ಯ ಮಟ್ಟದ ಸ್ಥಾನಮಾನ ಹೊಂದಿರುವ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಷಡಕ್ಷರಿ ಅವರಿಗೆ ಮತ್ತೊಂದು ಅಧಿಕಾರ ಸಿಕ್ಕಿಲ್ಲ. ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಈಗಾಗಲೇ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಹಿರಿಯ ಶಾಸಕರ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್, ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಮಾತ್ರ ಸಚಿವ ದರ್ಜೆಯ ಸ್ಥಾನಮಾನ ಪಡೆಯಲು ಸಾಧ್ಯವಾಗಿಲ್ಲ.