

ತುಮಕೂರು: ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ಕ್ಯಾಂಪಸ್ ಮಾಡಲು ತುಮಕೂರು ವಿವಿ ಜೀವವೈವಿಧ್ಯ ಕೋಶದೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿವಿ ವಿಜ್ಞಾನ ಕಾಲೇಜು ಜೀವಾವರಣಶಾಸ್ತ್ರ ಮತ್ತು ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಶುಕ್ರವಾರ ಆಯೋಜಿಸಿದ್ದ "ತುಮಕೂರು ವಿವಿ ಆವರಣ ಹಾಗೂ ಬಿದರಕಟ್ಟೆ ಕ್ಯಾಂಪಸ್ನಲ್ಲಿ ಮರಗಳ ಜಿಯೋ ಟ್ಯಾಗಿಂಗ್ ಮತ್ತು ಜೀವವೈವಿಧ್ಯ ದಾಖಲಾತಿ' ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಕೇವಲ ಪ್ರಚಾರಕ್ಕಾಗಿ ಸಸಿ ನೆಡಬಾರದು, ಸಸಿಯು ಹೆಮ್ಮರವಾಗುವ ತನಕವೂ ಅದರ ಪಾಲನೆ, ಪೋಷಣೆ ನಮ್ಮದಾಗಬೇಕು. ಮಾಲಿನ್ಯ ರಹಿತ ಪರಿಸರ ನಿರ್ಮಿಸಲು ಸಾಧ್ಯವಾಗದಿದ್ದರೂ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಗಾಳಿ, ನೀರು ನಮ್ಮ ಆರೋಗ್ಯ ಕಾಪಾಡುವುದರಲ್ಲಿ ಮುಖ್ಯಪಾತ್ರವಹಿಸುತ್ತವೆ ಎಂದರು.
ಕುಲಸಚಿವೆ ನಾಹಿದಾ ಜಮ್ಜಮ್ ಮಾತನಾಡಿ, ಜಾಗತಿಕ ತಾಪಮಾನ ತಡೆಯಲು ನಮ್ಮ ಗುರಿ ಹಾಗೂ ದೃಷ್ಟಿ ಜೊತೆಯಲ್ಲಿ ಸಾಗಬೇಕು. ಮಾಲಿನ್ಯರಹಿತ ಬದುಕು ನಮ್ಮದಾಗಲು ಪರಿಸರ ಕಾಳಜಿಯ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ವಿವಿ ವಿಜ್ಞಾನ ಕಾಲೇಜು ಪ್ರಾರ್ಚಾಉ ಪ್ರೊ.ಶೇಟ್ ಎಂ.ಪ್ರಕಾಶ್, ಪ್ರಾಧ್ಯಾಪಕ ಡಾ.ವಿ.ದ್ವಾರಕಾನಾಥ್ ಇದ್ದರು.