ಪರಮೇಶ್ವರ್, ಕೆಎನ್‌ಆರ್ ನಿವಾಸಕ್ಕೆ ಎಸ್‌ಪಿಎಂ ಭೇಟಿ; ಶೀಘ್ರ ಕಾಂಗ್ರೆಸ್‌ಗೆ ವಾಪಸ್?

spm dks
Published on

ತುಮಕೂರು: ಜಿಲ್ಲೆಯಲ್ಲಿ ಬುಧವಾರ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿವಾಸಕ್ಕೆ ಭೇಟಿಯಾಗಿ ಚರ್ಚಿಸಿದರು.

ಮಂಗಳವಾರ ತಡರಾತ್ರಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಎಸ್‌ಪಿಎಂ ಬಿಜೆಪಿಗೆ ಗುಡ್‌ಬೈ ಹೇಳಿ ಮಾತೃ ಪಕ್ಷ ಕಾಂಗ್ರೆಸ್‌ಗೆ ವಾಪಸಾಗುತ್ತಾರೆ ಎಂಬ ಮಾತು ಕೇಳಿಬಂದಿದೆ.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ ಸುರ್ಜೇವಾಲ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಎಸ್‌ಪಿಎಂ ನಡೆ ಕೂತೂಹಲ ಮೂಡಿಸಿದೆ.

ತುಮಕೂರಿನ ಕೆ.ಎನ್.ರಾಜಣ್ಣ ನಿವಾಸದಲ್ಲಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಮುದ್ದಹನುಮೇಗೌಡ, ಸ್ನೇಹಿತರೊಬ್ಬರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ರಾಜಣ್ಣ ಅವರನ್ನು ಭೇಟಿಯಾಗಿದ್ದೆ ಅಷ್ಟೇ ಎಂದು ಗುಟ್ಟು ಬಿಟ್ಟುಕೊಡದೆ ತೆರಳಿದರು.

ಕೆ.ಎನ್.ರಾಜಣ್ಣ ಮಾತನಾಡಿ, ರಾಜಕೀಯ ಮೀರಿ ನಾನೂ ಹಾಗೂ ಮುದ್ದಹನುಮೇಗೌಡ ಸ್ನೇಹಿತರಾಗಿದ್ದು, ಅವರು ನನ್ನ ಮನೆಗೆ ಬಂದಿರುವುದರಲ್ಲಿ ವಿಶೇಷ ಏನಿಲ್ಲ ಆದರೆ, ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇನೆ ಎಂದರು.

ಭೇಟಿ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಚ್.ವಿ.ವೆಂಕಟೇಶ್ ಕೂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net