ಕಿಚ್ಚವಾಡಿ ಕೋಣೆ ಚಿಕ್ಕಮ್ಮದೇವಿ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ

22222
Published on

ಹುಲಿಯೂರುದುರ್ಗ: ಕುಣಿಗಲ್​ ತಾಲೂಕು ಕಿಚ್ಚವಾಡಿ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ದಲಿತ ಮುಖಂಡರು ಎಸ್​ಸಿ, ಎಸ್​ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ತಹಸೀಲ್ದಾರ್​ ರಶ್ಮಿ ಎದುರು ದೂರಿದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನಡೆಸಿದ ಸಂಧಾನ ಸಭೆ ಲನೀಡಿದೆ.

ಕಳೆದ ಅಕ್ಟೋಬರ್​ 6 ರಂದು ದೇವಾಲಯ ಪ್ರವೇಶ ಕಲ್ಪಿಸಿ ಕೊಡಲು ಹೋದಾಗ ಸವರ್ಣಿಯರು ಅಡ್ಡಿಪಡಿಸಿದ್ದರು, ನಂತರದಲ್ಲಿ ದೇವಾಲಯ ಪ್ರವೇಶಿಸಲು ಗೋಪಿ, ಜಯಪ್ರಕಾಶ್​ ಎಂಬುವವರ ಕುಟುಂಬ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ ಫಲಕಾರಿಯಾಗಲಿಲ್ಲ. ಜಾತಿ ಕಾರಣಕ್ಕೆ ದೇವಾಲಯ ಪ್ರವೇಶ ನಿರಾಕರಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ದೇವಾಲಯ ಪ್ರವೇಶಕ್ಕೆ ನಿರಾಕರಿಸದಂತೆ ಕಾನೂನು ಪಾಠ ಮಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಗುರುವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸೂಚನೆ ನೀಡಿದ್ದರು. ತಹಸೀಲ್ದಾರ್​ ರಶ್ಮಿ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಕ್ಕಾಗಮಿಸಿ ದಲಿತರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.

ದಲಿತರಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ದೇವಸ್ಥಾನದ ಬೀಗ ಪಡೆದ ಅಧಿಕಾರಿಗಳು ದೇವಾಲಯದ ಬೀಗ ತೆಗೆಸಿ ಉಜ್ಜಿನಿ ಗಣಪತಿ ದೇವಾಲಯದ ಅರ್ಚಕನನ್ನ ಕರೆಸಿ ದಲಿತ ಕುಟುಂಬಕ್ಕೂ ದೇವಾಲಯ ಪ್ರವೇಶ ಕಲ್ಪಿಸಿ, ಪೂಜೆಗೂ ಅವಕಾಶ ಕಲ್ಪಿಸಿಕೊಟ್ಟರು.

ತಹಸೀಲ್ದಾರ್​ ರಶ್ಮಿ, ಸಮಾಜ ಕಲ್ಯಾಣ ಇಲಾಖೆ ಜೆಡಿ ಕೃಷ್ಣಪ್ಪ, ಡಿವೈಎಸ್​ಪಿ ಓಂ ಪ್ರಕಾಶ್​, ಪಿಡಿಒ ನಾಗರಾಜು, ದಲಿತ ಮುಖಂಡರಾದ ಬಿ.ಜಿ.ಗಂಗಾಧರ್​, ಎಸ್​.ಟಿ.ರಾಜು, ರಾಜು ವೆಂಕಟಪ್ಪ, ರಾಮಕೃಷ್ಣ, ಶಿವರಾಮ, ಸತೀಶ್​, ಪ್ರಶಾಂತ್​, ತಿಮ್ಮಪ್ಪ, ಪ್ರಕಾಶ್​, ಅನಿಲ್​, ಶಿವರಾಜು, ಗೋಪಿ ಜಯಪ್ರಕಾಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net