ಲೋಕಸಮರ ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ

DDDDD
Published on

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂ.4ರಂದು ನಡೆಯಲಿರುವ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಕಣದಲ್ಲಿರುವ ಅಭ್ಯರ್ಥಿಗಳು ಎಣಿಕೆ ಏಜೆಂಟರನ್ನು ನೇಮಿಸಿ, ಜೂ.1ರೊಳಗಾಗಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಕಲ್ಯಾಣ್ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.

ಜೂ.4ರಂದು ನಗರದ ತುಮಕೂರು ವಿವಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ 11 ಕೊಠಡಿಗಳಲ್ಲಿ 117 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರತಿ ಎಣಿಕಾ ಟೇಬಲ್‌ಗೆ ಒಬ್ಬ ಮತ ಎಣಿಕಾ ಏಜೆಂಟರನ್ನು ನೇಮಿಸಲು ಅವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಮತ ಎಣಿಕಾ ಏಜೆಂಟರನ್ನು ನೇಮಿಸಿ ಜೂ.1ರೊಳಗಾಗಿ ನಮೂನೆ 18ರಲ್ಲಿ ಮಾಹಿತಿ ಸಲ್ಲಿಸಬೇಕು ಎಂದರು.

ಬಿಗಿ ಭದ್ರತೆಯಲ್ಲಿರುವ ಮತಯಂತ್ರ:

ಪೊಲೀಸ್ ಹಾಗೂ ಸಿಎಪಿಎಫ್ ಭದ್ರತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಿರುವ ಭದ್ರತಾ ಕೊಠಡಿಯನ್ನು ಜೂನ್ 4ರಂದು ಬೆಳಗ್ಗೆ 7.30ಕ್ಕೆ ತೆರೆಯಲಾಗುವುದು. ಬೆಳಗ್ಗೆ 8ರಿಂದಲೇ ಮತ ಎಣಿಕೆ ಆರಂಭವಾಗಲಿದೆ.


ಮತ ಎಣಿಕೆಯನ್ನು ಗೊಂದಲವಿಲ್ಲದೆ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಭದ್ರತಾ ಕೊಠಡಿಯಿಂದ ಮತ ಎಣಿಕಾ ಕೊಠಡಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ತಂದು ಕೊಡಲು ನಿಯೋಜಿಸಿರುವ ಸಿಬ್ಬಂದಿಗಳಿಗೆ 8 ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಕಲರ್ ಕೋಡೆಡ್ ಟಿ-ಶರ್ಟ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net