ತೆರೆದ ಮನಸ್ಸಿನಿಂದ ಜ್ಞಾನ ಸ್ವೀಕರಿಸಿ; ಪ್ರೊ.ರಾಜಾರಾಮ ತೋಳ್ಪಾಡಿ

IMG_4326
Published on

ತುಮಕೂರು: ಜ್ಞಾನ ಅಗಾಧವಾದದ್ದರಿಂದ ಅದು ಯಾವ ಮೂಲದಿಂದ ಬಂದರೂ ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸದೆ ಹೋದರೆ ನಮ್ಮ ಆಲೋಚನೆಗಳು ಕುಬ್ಜವಾಗುತ್ತವೆ ಎಂದು ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಜಾರಾಮ ತೋಳ್ಪಾಡಿ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ "ಸಂರಚನಾವಾದ ಮತ್ತು ಸಂರಚನೋತ್ತರವಾದ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿಭಿನ್ನ ಜ್ಞಾನ, ಶಿಸ್ತುಗಳ ನಡುವಿನ ಗೋಡೆಗಳು ನಶಿಸಿಹೋಗುತ್ತಿರುವ ಕಾಲದಲ್ಲಿ ನಾವೆಲ್ಲರು ಬದುಕುತ್ತಿದ್ದೇವೆ ಎಂದರು.

ವಿಶ್ವವಿದ್ಯಾನಿಲಯಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಈ ಬಗೆಯ ಮುಕ್ತ ಕಲಿಕೆಯ ವಾತಾವರಣ ಇರಬೇಕು ಎಂದು
ಸಂರಚನಾವಾದ ಮತ್ತು ಸಂರಚನೋತ್ತರವಾದಗಳನ್ನು ಕೇವಲ ಪಾಶ್ಚಾತ್ಯ ಚಿಂತನೆಗಳೆಂದು ಪರಿಗಣಿಸಬೇಕಿಲ್ಲ. ಏಕೆಂದರೆ, ಜ್ಞಾನಕ್ಕೆ ಭೌಗೋಳಿಕತೆಯ ಸೀಮಿತ ವ್ಯಾಪ್ತಿ ಇಲ್ಲ. ನಮ್ಮ ವೈಯಕ್ತಿಕ ಸಂಬಂಧಗಳಿಂದ ಹಿಡಿದು ವಿಶ್ವವಿದ್ಯಾನಿಲಯದ ತರಗತಿಗಳವರೆಗೂ ಒಂದಲ್ಲ ಒಂದು ಬಗೆಯ ರಚನೆ ಇರುವುದನ್ನು ಗಮನಿಸಬಹುದು ಎಂದರು.

ನಮ್ಮ ಬದುಕಿನ ಪ್ರತಿಯೊಂದು ವಲಯಗಳಲ್ಲೂ ಅಧಿಕಾರ ಕೇಂದ್ರಿತವಾದ ಭಿನ್ನ ಸ್ತರದ ಸಂರಚನೆಗಳು ಇದ್ದೇ ಇರುತ್ತವೆ. ಇವುಗಳನ್ನು ಕೂಲಂಕಫಿವಾಗಿ ಅರಿತುಕೊಳ್ಳುವುದು ಸಂಶೋಧನೆಯಲ್ಲಿ ಮುಖ್ಯವಾದದ್ದು. ಸಂರಚನಾವಾದ ಅರ್ಥ ವಿವರಣಾಶಾಸ್ತ್ರದ ಮತ್ತೊಂದು ಮಗ್ಗಲು. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅರ್ಥದ ಸಮಸ್ಯೆ ಇದ್ದೇ ಇರುತ್ತದೆ ಎಂದು ತಿಳಿಸಿದರು.

ಅರ್ಥ ಎಂಬುದು ಕೇವಲ ಪಠ್ಯದ ಒಳಗಫಿ್ಟೇ ಇರದೆ, ಪ್ರತಿ ಓದುಗನ ಸಾಮಾಜಿಕ ಸ್ತರದಲ್ಲು ಇರುತ್ತದೆ. ಸಂರಚನಾವಾದವನ್ನು ನಿರಾಕರಿಸದೆ ಅದರ ಕೆಲವು ಮೂಲಭೂತ ಚಿಂತನೆಗಳನ್ನು ವಿಮರ್ಶಿಸುವ ಮೂಲಕ ಸಂರಚನೋತ್ತರವಾದ ಹುಟ್ಟಿಕೊಂಡಿತು ಎಂದು ತಿಳಿಸಿದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಭಾಷಾವಿಜ್ಞಾನಿಗಳಿಂದ ಹಿಡಿದು ಜಗತ್ತಿನ ವಿವಿಧ ವಲಯಗಳ ಜನ ಸಂರಚನೆ ಎಂಬುದರ ಬಗ್ಗೆ ಚಿಂತಿಸಿದ್ದಾರೆ. ಇದೊಂದು ಬಹುದೊಡ್ಡ ತಾತ್ವಿಕ ಜಿಜ್ಞಾಸೆಯು ಹೌದು. ಭಾಫಿೆಗೆ ಸಂಬಂಧಿಸಿದಂತೆ ಮೂಲಭೂತವಾಗಿ ನಡೆದ ಈ ಚರ್ಚೆ ಸಾಮಾಜಿಕವಾಗಿ ನಮ್ಮ ನಡುವಿರುವ ಬೃಹತ್​ ವಾಗ್ವಾದವೂ ಹೌದು ಎಂದರು.

ವಿವಿಯ ಸಾರ್ವಜನಿಕ ಆಡಳಿತ ವಿಭಾಗದ ಸಹಪ್ರಾಧ್ಯಾಪಕ ಡಾ.ಕೆ.ಸಿ.ಸುರೇಶ ಮತ್ತು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net