

ತುಮಕೂರು: ಗುಬ್ಬಿ ತಾಲೂಕಿನ ಚೇಳೂರು ಬಳಿ ವಿಶ್ವೇಶ್ವರಯ್ಯ ಜಲ ನಿಗಮ ನಿರ್ಮಿಸಿರುವ ವಿಶ್ವದಲ್ಲೇ ಅತಿ ಎತ್ತರರ 40ಮೀ ಎತ್ತರ ಏಷ್ಯದಲ್ಲಿ ಅತೀ ಉದ್ದದ 10.47ಕಿಮೀ ಮೇಲ್ಗಾಲುವೆ(ಅಕ್ವಡಿಕ್ಟ್)ಯನ್ನು ಗುರುವಾರ ಜಲಸಂಪನ್ಮೂಲ ಖಾತೆ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ವೀಕ್ಷಣೆ ಮಾಡಿದರು.
ಈ ಯೋಜನೆ ಮೂಲಕ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಅವರ ಬದುಕಿನಲ್ಲೇ ಒಂದು ಇತಿಹಾಸ ಬರೆದಿದ್ದಾರೆ. ಈ ಯೋಜನೆಯನ್ನು ನಾವು ದೇಶಕ್ಕೆ ಮಾದರಿಯಾಗಿ ಪರಿಚಯಿಸಬೇಕು. ಈ ಯೋಜನೆ ಮಾಡಿರುವ ಅಧಿಕಾರಿಗಳು, ತಂತ್ರಜ್ಞರು, ಗುತ್ತಿಗೆದಾರರಿಗೆ ವಿಧಾನಸೌಧದಲ್ಲಿ ಸೂಕ್ತ ರೀತಿಯಲ್ಲಿ ಗೌರವ ನೀಡಲಾಗುವುದು ಎಂದು ತಿಳಿಸಿದರು.
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಕುಡಿಯುವ ನೀರಿನ ಯೋಜನೆಗಳಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ನಮಗೆ ರೈತರ ಕಷ್ಟ ಗೊತ್ತಿದೆ, ರೈತರ ಹಿತಕ್ಕೆ ಶ್ರಮಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸಲು 3 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಭೈರಗೊಂಡ್ಲು ಬಳಿ ಜಲಸಂಗ್ರಹಗಾರ ನಿರ್ಮಿಸುವ ಅಗತ್ಯವಿದ್ದು ಇದಕ್ಕಾಗಿ ಆ ಭಾಗದ ರೈತರ ಮನಒಲಿಸಿ ಶ್ರೀದಲ್ಲಿಯೇ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗುಬ್ಬಿ ಶಾಸಕ ಶ್ರೀನಿವಾಸ್, ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಡಿಸಿಎಂ ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಮತ್ತಿತರರು ಇದ್ದರು.