ಶಾಸನಸಭೆಗಳಲ್ಲಿ ಒಬಿಸಿಗಳಿಗೂ ರಾಜಕೀಯ ಮೀಸಲಾತಿ ಸಿಗಲಿ

KNR_Programme
Published on

ತುಮಕೂರು: ಪರಿಶಿಷ್ಟ ಜಾತಿ-ಪಂಗಡದವರಿಗೆ ಇರುವಂತೆ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ದೊರೆಯಬೇಕು ಎಂದು ಮಾಜಿ ಸಚಿವ ಕೆ.ಎನ್​.ರಾಜಣ್ಣ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಏರ್ಪಡಿಸಿದ್ದ ಸರ್ಕಾರದ ವಿವಿಧ ಸ್ಥಾನಗಳಿಗೆ ನಿಯುಕ್ತಿಗೊಂಡವರನ್ನು ಅಭಿನಂದಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು ಹಾಗಾಗಿ, ಅವರಿಗೂ ಮೀಸಲಾತಿ ನೀಡಲಿ ಎಂದರು.

ರಾಜಕೀಯ ಅಧಿಕಾರ ಇಲ್ಲದಿದ್ದರೆ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು ಅವಕಾಶ ಸಿಗುವುದಿಲ್ಲ. ರಾಜಕೀಯ ಅಧಿಕಾರ ಇಲ್ಲದ ಸಮುದಾಯಗಳು ರಾಜಕೀಯ ಅಧಿಕಾರ ಹೊಂದಿರುವ ಸಮುದಾಯಗಳ ಮೇಲೆ ಅವಲಂಬಿತವಾಗುವಂತಹ ಪರಿಸ್ಥಿತಿ ಬರುತ್ತದೆ. ರಾಜಕಾರಣದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಬೇಕು. ರಾಜಕೀಯ ಅಧಿಕಾರ ಪಡೆಯಲು ಸಮುದಾಯಗಳು ಸಂಘಟಿತರಾಗಬೇಕು. ಸಹಕಾರ ಕ್ಷೇತ್ರದಲ್ಲಿ ಅವಕಾಶವಿಲ್ಲದ ಸಮಜದವರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಸಹಕಾರ ಸಚಿವರಾಗಿದ್ದಾಗ ಸಹಕಾರ ಸಂಸ್ಥೆಗಳಲ್ಲಿ ಸರ್ಕಾರ ಮೀಸಲಾತಿ ಜಾರಿ ಮಾಡಿದೆ. ಅವರೂ ಸರ್ಕಾರದಲ್ಲಿ ಧ್ವನಿ ಮಾಡಿ ತಮ್ಮ ಸಮಸ್ಯೆಗಳನ್ನು ಚರ್ಚಿಸಬಹುದು ಎಂದು ಹೇಳಿದರು.

ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗಲು ಅನುಕೂಲವಾಗುವಂತೆ ಸಮಾಜಕ್ಕೆ ಕೊಡುಗೆ ಕೊಟ್ಟಿರುವ ಎಲ್ಲಾ ದಾರ್ಶನಿಕರ ಜಯಂತಿಯನ್ನು ಒಂದೇ ದಿನ, ಒಂದೇ ವೇದಿಕೆಯಲ್ಲಿ ಆಚರಿಸುವ ಹೊಸ ಸಂಪ್ರದಾಯ ಆರಂಭಿಸಬೇಕು ಎಂದು ರಾಜಣ್ಣ ಸರ್ಕಾರಕ್ಕೆ ಒತ್ತಾಯಿಸಿದರು.

ಮಾಜಿ ಶಾಸಕ ಡಾ.ಎಂ.ಆರ್​.ಹುಲಿನಾಯ್ಕರ್​ ಮಾತನಾಡಿ, ರಾಜಕೀಯ ಅಧಿಕಾರವನ್ನು ಯಾರೂ ಕೊಡುವುದಿಲ್ಲ, ನಾವೇ ತೆಗೆದುಕೊಳ್ಳಬೇಕು. ತೆಗೆದುಕೊಳ್ಳಲು ನಾಯಕನ ಬೆನ್ನಿಗೆ ಜನಶಕ್ತಿ ಇರಬೇಕು. ಹಾಗಾಗಿ, ಸಂಘಟನೆ ಮುಖ್ಯವಾಗುತ್ತದೆ. ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಪೂರಕ ಮಾಹಿತಿ ನಮೂದಿಸಬೇಕು. ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಿಎಂಟಿಸಿ ಉಪಾಧ್ಯಕ್ಷ ಎಂ.ನಿಕೇತ್​ರಾಜ್​ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಶಕ್ತಿ ತುಂಬಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ, , ಕೆ.ಎನ್​.ರಾಜಣ್ಣ, ದೇವರಾಜ ಅರಸರ ನಂತರ ಶೋಷಿತ ಸಮುದಾಯಗಳ ಪರ ನಿಂತಿರುವ ನಾಯಕರಾಗಿದ್ದಾರೆ ಎಂದರು.

ಸರ್ಕಾರದ ವಿವಿಧ ಮಂಡಳಿ, ಯೂನಿಯನ್​, ವಿವಿ, ನಿಗಮಗಳಿಗೆ ನೇಮಕವಾಗಿರುವ ಪ್ರೊ.ಕೆ.ಜಿ.ಪರಶುರಾಮ್​, ಮಹೇಶ್​, ಮುತ್ತುರಾಜು, ಜೆ.ಪಿ.ಶಿವಣ್ಣ, ಡಿ.ಎಂ.ಸತೀಶ್​, ಧನಿಯಾಕುಮಾರ್​ ಮತ್ತಿತರರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್​.ಮಧುಕರ, ಗೌರವ ಸಲಹೆಗಾರ ಎಂ.ಕೆ.ವೆಂಕಟಸ್ವಾಮಿ, ಉಪಾಧ್ಯಕ್ಷ ಶಾಂತಕುಮಾರ್​, ಮಂಜೇಶ್​, ಎಸ್​.ನಾಗಣ್ಣ ಮತ್ತಿತರರು ಇದ್ದರು.

ಸರ್ಕಾರ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಸಮೀಕ್ಷೆಯಿಂದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಜನಸಂಖ್ಯೆಯ ಮಾಹಿತಿ ಸರ್ಕಾರಕ್ಕೆ ದೊರೆಯುತ್ತದೆ. ಅದರ ಆಧಾರದಲ್ಲಿ ಸರ್ಕಾರ ಮೀಸಲಾತಿ, ಮತ್ತಿತರ ಸೌಲಭ್ಯಗಳನ್ನು ಈ ವರ್ಗಗಳಿಗೆ ಹಂಚಲು ಅವಕಾಶವಾಗುತ್ತದೆ. ಸಮೀಕ್ಷೆ ವಿರೋಧಿಸುವವರ ವಿರುದ್ಧ ಹಿಂದುಳಿದ ವರ್ಗದವರು ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು. ರಮೇಶ್​ಬಾಬು ವಿಧಾನ ಪರಿಷತ್​ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net