ಜಿಲ್ಲಾಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ

DS_Hospital
Published on

ತುಮಕೂರು: ನಗರದಲ್ಲಿ 78 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆ ಕಲ್ಲು ಕಟ್ಟಡವನ್ನು ಶ್ರೀದಲ್ಲಿಯೇ ನೆಲಸಮಗೊಳಿಸಿ, 131 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆ ನಿಮಾರ್ಣ ಕಾರ್ಯಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನೂತನ ಜಿಲ್ಲಾ ಆಸ್ಪತ್ರೆ ನಿಮಾರ್ಣ ಕುರಿತು ಅಧಿಕಾರಿಗೊಂದಿಗೆ ಸಭೆ ನಡೆಸಿದ ಅವರು, ಕಟ್ಟಡವನ್ನು ನೆಲಸಮಗೊಳಿಸಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಜಿಲ್ಲಾ ಆಸ್ಪತ್ರೆ ನಿಮಾರ್ಣದ ವಿವರವಾದ ಯೋಜನಾ ವರದಿ ತಯಾರಿಕೆ, ವಾಸ್ತುಶಿಲ್ಪ, ರಚನಾತ್ಮಕ ವಿನ್ಯಾಸ ಹಾಗೂ ಇತರ ತಾಂತ್ರಿಕ ರೇಖಾಚಿತ್ರಗಳ ಸಿದ್ಧತೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆ ಶೀಘ್ರ ಪೂರ್ಣಗೊಂಡು ಶಂಕುಸ್ಥಾಪನೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ 100 ಹಾಸಿಗೆಗಳ ತುರ್ತು ನಿಗಾ ಘಟಕ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆ ಕೂಡ ಅಂದೇ ನೆರವೇರಿಸಲು ವ್ಯವಸ್ಥೆ ಕೈಗೊಳ್ಳುವಂತೆ ಸಚಿವರು ತಿಳಿಸಿದರು.

ಅಲ್ಲದೆ, ನರ್ಸಿಂಗ್​ ಕಾಲೇಜು ಕಟ್ಟಡ ನಿಮಾರ್ಣ ಕಾಮಗಾರಿಗೆ ಹಾಗೂ ದಿಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರೆ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ಒಂದೇ ದಿನ ನೆರವೇರಿಸಲು ಅನುವಾಗುವಂತೆ ಕಾರ್ಯ ಯೋಜನೆ ರೂಪಿಸಬೇಕು. ಈ ಎಲ್ಲಾ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಸಿಎಂ ಆಹ್ವಾನಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಡಿಎಚ್​ಒ ಡಾ.ಚಂದ್ರಶೇಖರ್​, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್​ ಬೇಗ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net