ಉಜ್ಜನಕುಂಟೆಯಿಂದ ನಂದಿಹಳ್ಳಿವರೆಗೆ 90 ಕಿಮೀ ಉದ್ದದ ಮಾನವ ಸರಪಳಿಗೆ ಜಿಲ್ಲಾಡಳಿತ ಸಜ್ಜು

DDCCCC
Published on

ತುಮಕೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸೆ.15ರಂದು ಬೀದರ್​ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆವರೆಗೂ ನಿಮಾರ್ಣ ಮಾಡಲು ಉದ್ದೇಶಿಸಿರುವ 2500 ಕಿಮೀ ಉದ್ದದ ಮಾನವ ಸರಪಳಿಯು ವಿಶ್ವ ದಾಖಲೆಯನ್ನು ಸೃಷ್ಟಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಯಾವುದೇ ಇಂತಹ ಮಾನವ ಸರಪಳಿ ಮಾಡಿದ ಉದಾಹರಣೆಗಳಿಲ್ಲ. ಸುಮಾರು 25 ಲಕ್ಷ ಜನರಿಂದ ನಿಮಾರ್ಣವಾಗಲಿರುವ ಈ ಮಾನವ ಸರಪಳಿ ವಿಶ್ವದಾಖಲೆ ಸೃಷ್ಟಿಸಲಿದೆ ಎಂದು ಭಾವಿಸಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಹಾಗೂ ಡಾ.ಬಿ.ಆರ್​.ಅಂಬೇಡ್ಕರ್​ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ, ಬಡವರು, ಮಹಿಳೆಯರಿಗೆ ಸಂವಿಧಾನದ ಮಹತ್ವವನ್ನು ತಿಳಿಸಲು ರಾಜ್ಯದ 6000ಕ್ಕು ಹೆಚ್ಚು ಗ್ರಾಪಂಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಪಂ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಪಂ ನಂದಿಹಳ್ಳಿ ಗ್ರಾಮದವರೆಗೆ 90 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಸರ್ಕಾರ ರ್ನಿಣಯಿಸಿರುವ ಸ್ಥಳದಲ್ಲಿ ಬೆಳಿಗ್ಗೆ 8 ರಿಂದ ಪ್ರಾರಂಭವಾಗಿ 10 ಗಂಟೆವರೆಗೆ ಮಾನವ ಸರಪಳಿಯನ್ನು ನಿರ್ಮಿಸಲಾಗುವುದು. ಮಾನವ ಸರಪಳಿಯಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆ, ದಲಿತ ಮತ್ತು ಮಹಿಳಾಪರ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಾದು ಹೋಗಲಿರುವ ಮಾನವ ಸರಪಳಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ 100 ಮೀ. ಒಬ್ಬ ಸೆಕ್ಷನ್​ ಅಧಿಕಾರಿಯಂತೆ 900 ಅಧಿಕಾರಿ ನೇಮಿಸಲಾಗಿದೆ. ಅಲ್ಲದೆ ಪ್ರತಿ ಕಿಲೋ ಮೀಟರ್​ಗೆ ಒಬ್ಬ ನೋಡೆಲ್​ ಅಧಿಕಾರಿಯಂತೆ 90 ತಾಲೂಕು ಮಟ್ಟದ ಅಧಿಕಾರಿ, ಪ್ರತಿ 5 ಕಿಮೀಗೆ ಒಬ್ಬರಂತೆ 18 ಜಿಲ್ಲಾ ಮಟ್ಟದ ಅಧಿಕಾರಿ ನೇಮಿಸಲಾಗಿದೆ. ಶಿರಾ ಮತ್ತು ತುಮಕೂರು ತಾಲೂಕು ತಹಸೀಲ್ದಾರ್​, ತಾಪಂ ಇಒ, ಪಿಡಿಒಗಳಿಗೆ ಸ್ಥಳಿಯವಾಗಿ ಆಯಾ ತಾಲೂಕು ವ್ಯಾಪ್ತಿಯ ಜವಾಬ್ದಾರಿ ವಹಿಸಲಾಗಿದೆ ಹಾಗೂ ಪ್ರತಿ 30 ಕಿಮೀಗೆ ಒಬ್ಬರಂತೆ 3 ಮಂದಿ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆ ಸೇರಿದಂತೆ 330 ಗ್ರಾಪಂಯ ಎಲ್ಲಾ ಸಾರ್ವಜನಿಕ ಬಂಧುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಕಲಾವಿದರಿಗೆ ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ ಎಂದರು.

ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕೋದ್ಯಮ ಸಹ ಪ್ರಜಾಪ್ರಭುತ್ವದ ಒಂದು ಭಾಗವೆಂದು ಕರೆಯಲಾಗಿದೆ. ನಾನು ಬೇರೆ ದೇಶಗಳ ಸಂವಿಧಾನ ಓದಿದ್ದೇನೆ. ಭಾರತದ ಸಂವಿಧಾನಕ್ಕೆ ಬೇರೆ ದೇಶಗಳ ಸಂವಿಧಾನ ಹೋಲಿಸಲು ಸಾಧ್ಯವೇ ಇಲ್ಲ. ನಮಗೆ ಸಂವಿಧಾನ ಭಗವದ್ಗೀತೆ, ಕುರಾನ್​, ಬೈಬಲ್​, ಗುರುಗ್ರಂಥ ಎಲ್ಲವೂ ಆಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಜಿಪಂ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಉಪವಿಭಾಗಾಧಿಕಾರಿ ಗೌರವಕುಮಾರ್​ ಶೆಟ್ಟಿ ಹಾಗೂ ಸಪ್ತಶ್ರೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net