

ತುಮಕೂರು: ಆಶಾದಾಯಕ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ತೆಂಗಿನಕಾಯಿ ಬೆಲೆ ಹೆಚ್ಚಳವಾಗಲಾರಂಭಿಸಿದ್ದು ತೆಂಗು ಬೆಳೆಗಾರರ ಬಾಳಲ್ಲಿ ಹೊಸ ಬೆಳಕು ಮೂಡಿಸಿದೆ. ಗಾತ್ರದ ಒಂದು ತೆಂಗಿನಕಾಯಿ 20ರಿಂದ 30ರೂ. ವರೆಗೂ ಹಾಗೂ ಕೆಜಿಗೆ 50ರಿಂದ 60ರೂ. ವರೆಗೂ ಮಾರಾಟವಾಗುತ್ತಿದ್ದು ರಾಜ್ಯ ಎಲ್ಲಾ ಮಾರುಕಟ್ಟೆಗಳಲ್ಲಿ ಬೇಡಿಕೆ ಸೃಷ್ಠಿಯಾಗಿದೆ.
ತುಮಕೂರು ಜಿಲ್ಲೆಯಲ್ಲಿ 2.50ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆಯಾದರೂ ಎಲ್ಲೆಡೆಯೂ ಇಳುವರಿ ಕುಂಠಿತವಾಗಿ ತೋಟಗಳಲ್ಲಿ ಎಳನೀರು, ಹಣ್ಣುಗಾಯಿಗಳಿಲ್ಲ ರೈತರು ಆತಂಕಿಸುವಂತಾಗಿದೆ. ನೂರಾರು ತೆಂಗಿನ ಮರಗಳಿದ್ದರೂ ಕಾಯಿ ಕಡಿಮೆಯಾಗುತ್ತಿದೆ
ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ತೆಂಗಿನಕಾಯಿ ಬೆಲೆ 50ರಿಂದ 60ರೂ.ಗೆ ಮಾರಾಟವಾಗುತ್ತಿದ್ದು ಎಲ್ಲೆಡೆಯೂ ಕಾಯಿಗೆ ಬೇಡಿಕೆ ಸೃಷ್ಠಿಯಾಗುತ್ತಿದೆ. ಸತತ ಬರ, ಹೆಚ್ಚು ಮಳೆ, ವಿವಿಧ ರೋಗದ ಕಾರಣಕ್ಕೆ ತೆಂಗಿನ ತೋಟಗಳಲ್ಲಿ ಇಳುವಳಿ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಠಿಯಾಗಲು ಕಾರಣವಾಗಿದೆ.
ಶೂನ್ಯಮಾಸ ಮುಗಿದು ಕಾರ್ತೀಕ ಆರಂಭವಾದರೆ ಶುಭಕಾರ್ಯಗಳು ಆರಂಭವಾಗಲಿದ್ದು ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾಗಿ, ರೈತರು ಸಂಪ್ರದಾಯಕವಾಗಿ ಕೊಬ್ಬರಿ ಉತ್ಪಾದಿಸಿ ಮಾರಾಟ ಮಾಡುವ ಬದಲಾಗಿ ಹಸಿಕಾಯಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.
ತುಮಕೂರು ಕೊಬ್ಬರಿಗೆ ಹೈದರಾಬಾದ್, ಮುಂಬೈ ಹಾಗೂ ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ ಇಲ್ಲಿ ಚಳಿಗಾಲದಲ್ಲಿ ಮಾತ್ರ ಕೊಬ್ಬರಿ ಹೆಚ್ಚು ಬಳಸುತ್ತಾರೆ, ಬಿಸಿಲು ಆರಂಭವಾದರೆ ಕೊಬ್ಬರಿಗೆ ಬೇಡಿಕೆ ಕಡಿಮೆ. ಇದೇ ಸಮಯದಲ್ಲಿ ಜಿಲ್ಲೆಯಲ್ಲಿ ಕೊಬ್ಬರಿಗೆ
ಅತೀಯಾದ ಪೂರೈಕೆ ಆರಂಭವಾಗಿದ್ದು ಬೆಲೆ 14 ಸಾವಿರ ಆಸುಪಾಸಿನಲ್ಲಿಯೇ ಇದೆ.
ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಯುವ ರಾಜ್ಯದ 17 ಜಿಲ್ಲೆಗಳಲ್ಲಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ, ರೈತರ ಆದಾಯ ಮೂಲವಾಗಿ ಪ್ರಮುಖವಾಗಿ ವಾಣಿಜ್ಯ ಬೆಳೆ ಎನ್ನಿಸಿಕೊಂಡಿರುವ ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೊಬ್ಬರಿ ಬೆಲೆ ಕುಸಿತವಾಗಿದೆ.
ಪ್ರಸ್ತುತ ತೆಂಗಿನಕಾಯಿ ಹಾಗೂ ಎಳನೀರುಗೆ ಬಂರ್ ಬೆಲೆ ಬರುತ್ತಿದೆಯಾದರೂ ತೋಟದಲ್ಲಿ ಇಳುವರಿ ಕುಂಠಿತವಾಗಿರುವುದು ಕೈಗೆ ಬಂದಿರುವ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.
ಮಾರುಕಟ್ಟೆಯಲ್ಲಿ ಎಳನೀರು ಹಾಗೂ ತೆಂಗಿನಕಾಯಿಗೆ ಬೆಲೆ ಹೆಚ್ಚಳವಾಗುವ ಲಕ್ಷಣ ಕಂಡುಬರುತ್ತಿದೆಯಾದರೂ ರೈತರ ತೋಟದಲ್ಲಿ ಕಾಯಿ ಇಲ್ಲ. ಸತತ ಬರ, ಅಕಾಲಿಕ ಮಳೆ, ರೋಗಗಳ ಕಾರಣದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದ್ದು ಎಷ್ಟೇ ಬೆಲೆ ಹೆಚ್ಚಳವಾದರೂ ರೈತರಿಗೆ ಸಿಗುವ ಹಣ ಕಡಿಮೆಯೇ ಇರಲಿದೆ. ತುಮಕೂರು ಭಾಗದ ರೈತರು ಕೊಬ್ಬರಿ ಉತ್ಪಾದಿಸುವ ಬದಲಾಗಿ ಎಳನೀರು, ಕಾಯಿ ಮಾರಾಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಂದೀಶ್ ರೈತ, ತಿಪಟೂರು