

ತುಮಕೂರು: ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಆರೆಂಜ್ ಮತ್ತು ಯೆಲ್ಲೋ ಅರ್ಲಟ್ ಇರುವುದರಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಮತ್ತು ಯೆಲ್ಲೋ ಅರ್ಲಟ್ ಘೋಷಣೆ ಮಾಡಲಾಗಿದೆ.
ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತುರ್ತು ಪತ್ರಿಕಾ ಪ್ರಕಟಣೆ ಮೂಲಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯೆ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆಯಿಂದ ಯಾವುದೇ ಜನ-ಜಾನುವಾರುಗಳಿಗೆ ಜೀವ ಹಾನಿಯಾಗದಂತೆ ನದಿ, ಹಳ್ಳ ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ, ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿದು ಸಾವು-ನೋವುಗಳು ಸಂಭವಿಸುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ರಾಜ್ಯ, ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳು ನೀಡುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ: 7304975519, 0816-2213404, 155304ನ್ನು ಸಂಪರ್ಕಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.