ಬೆಳ್ಳಿರಥದಲ್ಲಿ ಗ್ರಾಮದೇವತೆಗಳ ವೈಭವ

grama_Devathe
Published on

ತುಮಕೂರು: ತುಮಕೂರು ದಸರಾ ಉತ್ಸವದ ಭಾಗವಾಗಿ ನಡೆದ ಜಂಬೂ ಸವಾರಿ ವಿಜೃಂಭಣೆಯಿಂದ ನೆರವೇರಿತು. ವಿಜಯದಶಮಿದಂದು ಸೀತಕಲ್ಲು ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿ ಮೆರವಣಿಗೆಯನ್ನು ಸಹಸ್ರಾರು ಜನ ಸಾಕರಿಸಿದರು. ಮೆರವಣಿಗೆ ಸಾಗಿದ ರಾಜಮಾರ್ಗದ ಇಕ್ಕೆಲುಗಳಲ್ಲಿ ನಿಂತ ತುಮಕೂರಿಗರು ದೇವಿ ದರ್ಶನ ಪಡೆದು ಧನ್ಯತಾಭಾವ ಮೆರದರು. ನಾಡಹಬ್ಬ ಮೈಸೂರು ದಸರಾ ನೆನಪಿಸುವಂತಿದ್ದ ಈ ಬಾರಿಯ ತುಮಕೂರು ದಸರಾ ಜಂಬೂ ಸವಾರಿಯು ಐತಿಹಾಸಿಕವೆನಿಸಿತ್ತು.

50ಕ್ಕು ಹೆಚ್ಚು ಗ್ರಾಮದೇವತೆಗಳ ಮೆರವಣಿಗೆ

ಎನ್​.ಆರ್​. ಕಾಲನಿಯ ಶ್ರೀ ದುರ್ಗಾಂಬ, ಶ್ರೀ ಪೂಜಾಂಬ ಹಾಗೂ ಶ್ರೀ ದಾಳಂಬ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ಜಯಪುರ ಬಡಾವಣೆಯ ಶ್ರೀ ಮಹಾಲಕ್ಷ್ಮಿ ದೇವಿ, ಯಲ್ಲಾಪುರದ ಶ್ರೀ ಕಾಳಿಕಾಂಬ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಶೆಟ್ಟಿಹಳ್ಳಿಯ ಶ್ರೀ ರೇಣುಕಾ ಯಲ್ಲಮ್ಮ, ಚನ್ನಪ್ಪನ ಪಾಳ್ಯದ ಶ್ರೀ ಮಾರಮ್ಮ, ಚಿಕ್ಕಪೇಟೆಯ ಗ್ರಾಮದೇವತೆ, ಪಾಂಡುರಂಗ ನಗರದ ಶ್ರೀ ಅಂಕಲಾಮ್ಮ, ಮಂಡಿಪೇಟೆಯ ಶ್ರೀ ಭದ್ರಕಾಳಿ ಹಾಗೂ ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಬನಶಂಕರಿಯ ಶ್ರೀ ಆದಿಶಕ್ತಿ ಹಟ್ಟಿಮಾರಮ್ಮ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಬೆಳ್ಳಿ ರಥ (ಸಾರೋಟು)ದ ಮೆರವಣಿಗೆ ಭಕ್ತಿಭಾವ ಮೂಡಿಸಿದವು. ಮೆರವಣಿಗೆ ವೇಳೆ ಹೆಲಿಕಾಪ್ಟರ್​ನಿಂದ ಪುಷ್ಪವೃಷ್ಟಿ ಸುರಿಸಲಾಯಿತು.

ಶಮೀ ಪೂಜೆ ಸಂಪನ್ನ

ಜಂಬೂ ಸವಾರಿ ಮೆರವಣಿಗೆಯು ರಾಜಮಾರ್ಗದಲ್ಲಿ ಸಾಗಿ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬಲತಿರುವ ಪಡೆದ ಬಿ.ಎಚ್​.ರಸ್ತೆ ಮಾರ್ಗವಾಗಿ ಭದ್ರಮ್ಮ ಛತ್ರದ ವೃತ್ತ (ಶ್ರೀ ಜಗದ್ಗುರು ಪಂಚಾಚಾರ್ಯ ವೃತ್ತ)ದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪುವ ಹೊತ್ತಿಗೆ ಸಂಜೆ 4. ನಂತರ ವಿವಿಧ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಸಚಿವ ಪರಮೇಶ್ವರ ಅವರು ಕದಳಿ ಛೇದನ ಮಾಡುವ ಮೂಲಕ ನವರಾತ್ರಿ ಉತ್ಸವವು ಸಂಪನ್ನಗೊಂಡಿತು.

ರಸ್ತೆ ಇಕ್ಕೆಲುಗಳಲ್ಲಿ ಕಾದ ಜನ

ಜಂಬೂ ಸವಾರಿ ಸಾಗಿದ ರಸ್ತೆಯುದ್ದಕ್ಕು ಜನ ಕಾದು ನಿಂತು ಜಂಬೂಸವಾರಿಯನ್ನು ಕಣ್ತುಂಬಿಕುಂಡರು. ಬಿಜಿಎಸ್​ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತ ಹೀಗೆ ಪ್ರಮುಖ ಸ್ಥಳಗಳಲ್ಲಿ ಜಂಬೂ ಸವಾರಿ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು. ಜಂಬುಸವಾರಿಯುದ್ದಕ್ಕು ಅಧಿಕಾರಿಗಳ ಜತೆ ಪರಮೇಶ್ವರ್​ ನಡೆದೇ ಸಾಗಿದರು. ಈ ಬಾರಿ ಜನಜಂಗುಳಿ ಕಂಡು ಪರಂ ಮುಖ ಅರಳಿತ್ತು. ಜಿಲ್ಲಾಡಳಿತ ನೇತೃತ್ವವಹಿಸಿದ್ದ ಅಧಿಕಾರಿಗಳು ನಿಟ್ಟುಸಿರುಬಿಟ್ಟರು. ಮೊದಲೇ ಸಾಕಷ್ಟು ಸೂಚನೆಗಳನ್ನು ಕೊಟ್ಟು ಪೊಲೀಸರು ರಸ್ತೆ ಸಂಚಾರ ಮಾರ್ಗ ಬದಲಿಸಿದ್ದರಿಂದ ಜಂಬೂಸವಾರಿ ನಡೆದ ಸಮಯದಲ್ಲಿ ಎಲ್ಲಿಯೂ ಸಂಚಾರ ದಟ್ಟಣೆ ಕಾಣಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net