

ತುಮಕೂರು: ತುಮಕೂದು ದಸರಾ ಆಚರಣೆಯಲ್ಲಿ ಎಲ್ಲಿಯೂ ಧಾರ್ಮಿಕ ವಿಧಿವಿಧಾನಗಳು, ಸಂಪ್ರದಾಯಗಳಿಗೆ ಕಿಂಚಿತ್ತು ಚ್ಯುತಿ ಬಾರದಂತೆ ಜಿಲ್ಲಾಡಳಿತ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಅ.3 ರಂದು ಬೆಳಗ್ಗೆ 5.30ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಯೊಂದಿಗೆ ತುಮಕೂರು ದಸರಾ ಆಚರಣೆಗೆ ಚಾಲನೆ ನೀಡಲಾಗುವುದು.
ನಗರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ದಸರಾ ಉತ್ಸವದ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಸಭೆ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲಿಯೇ ಚಾಮುಂಡೇಶ್ವರಿ ದೇವಿಯನ್ನು ಶುಭ ಮುಹೂರ್ತದಲ್ಲಿ ಗುರುವಾರದಂದು ಪ್ರತಿಷ್ಠಾಪಿಸುವುದರೊಂದಿಗೆ ಅ. 12ರವರೆಗೂ ಪ್ರತಿ ದಿನ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಶರನ್ನವರಾತ್ರಿಯ 9 ದಿನಗಳು ದಸರಾ ಸಂದರ್ಭದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರತಿ ದಿನ ಸಂಜೆ ಹರಿಕಥೆ, ಭಜನೆ, ಭಕ್ತೀಗಿತೆ, ಮತ್ತಿತರ ಭಕ್ತಿಪ್ರಧಾನ ಕಾರ್ಯಕ್ರಮಗಳನ್ನು ಏರ್ಪಡಿಸಲು ಕ್ರಮಕೈಗೊಳ್ಳಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧತೆ ಹಾಗೂ ಅಲಂಕಾರ, ನಿರಂತರ ವಿದ್ಯುತ್ ಸರಬರಾಜು, ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುಂತೆ ಸೂಚನೆ ನೀಡಿದರು.
ಸ್ವಚ್ಛತೆ,ದೀಪಾಲಂಕಾರಕ್ಕೆ ಒತ್ತು : ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛ, ಶುಭ್ರವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸೂಕ್ತಕ್ರಮವಹಿಸಲಿದೆ. ಅಲ್ಲದೆ, ನಗರದಾದ್ಯಂತ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿ ಕಟ್ಟಡ ಹಾಗೂ ಪ್ರಮುಖ ಬೀದಿಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಅಲಂಕರಿಸಬೇಕು ಎಂದು ಶುಭಕಲ್ಯಾಣ್ ತಿಳಿಸಿದರು.
ದಸರಾ ಉತ್ಸವ ಪ್ರಯುಕ್ತ ಅ.12ರಂದು ಮಿನಿ ಜಂಬೂ ಸವಾರಿ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ದೇವಿಯನ್ನು ಕೂರಿಸಿರುವ ಅಲಂಕೃತ ಅಂಬಾರಿ ಹೊತ್ತ ಆನೆ, ವಿಂಟೇಜ್ ಕಾರ್, ಹುಲಿವೇಷ, ಚಿಟ್ಟಿಮೇಳ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು, ಹಳ್ಳಿಕಾರ್ ಎತ್ತುಗಳು, 70 ವಿವಿಧ ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.
ದಸರಾ ಪ್ರಯುಕ್ತ ಅ.11 ಮತ್ತು 12ರಂದು ಸಂಜೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಖ್ಯಾತ ಕಲಾವಿದರಿಂದ ಸಾಂಸ್ಕತಿಕ ಕಾರ್ಯಕ್ರಮ, ರಸಸಂಜೆ, ದ್ರೋಣ್ ಶೋ, ಬಾಣ-ಬಿರುಸುಗಳ ಪ್ರದರ್ಶನ, ವಸ್ತುಪ್ರದರ್ಶನಗಳು ನಡೆಯಲಿವೆಯಲ್ಲದೆ, ಯುವ ದಸರಾದ ಅಂಗವಾಗಿ ಅ.6 ರಿಂದ 10ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಯೂ ಸಹ ಖ್ಯಾತ ಕಲಾವಿದರು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅರಣ್ಯ ಉಪ ಸಂರಕ್ಷಣಾಧಿಕಾರಿ ಎಚ್.ಅನುಪಮ, ಮುಜರಾಯಿ ತಹಶೀಲ್ದಾರ್ ಸವಿತಾ, ಅರ್ಚಕರ ಸಂಘದ ಅಧ್ಯಕ್ಷ ರಾಮತೀರ್ಥನ್, ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ ವಿವಿಧ ದೇವಾಲಯದ ಧಮಾರ್ಧಿಕಾರಿಗಳು, ದಸರಾ ಉತ್ಸವ ಸಮಿತಿಗಳ ಸದಸ್ಯರು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ರಾಹ್ಮಿ ಮುಹೂರ್ತದಲ್ಲಿ ದೇವಿ ಪ್ರತಿಷ್ಠಾಪನೆ
ಶರನ್ನವರಾತ್ರಿಯ ಮೊದಲ ದಿನವಾದ ಅ.3 ರಂದು ಬೆಳಗ್ಗೆ 5.30ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ತುಮಕೂರು ದಸರಾಗೆ ಚಾಲನೆ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಅ.12ರವರೆಗೂ ಪ್ರತಿ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯಾಹ, ಗಣಪತಿ ಪೂಜೆ, ಪ್ರಧಾನ ಕಳಶಾರಾಧನೆ, ಪಂಚಾಮೃತ ಅಭಿಷೇಕ, ಹೋಮ-ಹವನ, ಮಹಾ ಮಂಗಳಾರತಿ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಎಲ್ಲಾ ಪೂಜಾ ವಿಧಾನಗಳು ಸಣ್ಣಪುಟ್ಟ ಲೋಪವಿಲ್ಲದಂತೆ ನಡೆಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚನೆ ನೀಡಿದರು.