ಜಂಬೂ ಸವಾರಿ ತಾಲೀಮು ನಡೆಸಿದ ಲಕ್ಷ್ಮೀ

ಆನೆ1
Published on

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ತುಮಕೂರು ದಸರಾ ಕಳೆಕಟ್ಟಿದ್ದು ಅ.12ರಂದು ಅದ್ಧೂರಿಯಾಗಿ ನಡೆಯಲಿರುವ ಜಂಬೂ ಸವಾರಿಯಲ್ಲಿ ಭಾಗವಹಿಸುವ ತುಮಕೂರಿನ ಕರಿಬಸವೇಶ್ವರ ಮಠದ ಆನೆ ಲಕ್ಷ್ಮೀ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಆನೆ ಲಕ್ಷ್ಮೀ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಿದವು.

ಡಿಎಫ್​ಐ ಎಚ್​.ಅನುಪಮಾ ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿರುವ ಮಾರ್ಗದಲ್ಲಿ ಎರಡು ಆನೆಗಳ ತಾಲೀಮು ನಡೆಸಿದ್ದು, ರಸ್ತೆಯಲ್ಲಿ ಯಾವುದೇ ಗಲಾಟೆ ಇಲ್ಲದೆ ಎರಡು ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕಿದವು.

ನಗರದ ಬಿಜಿಎಸ್​ ವೃತ್ತದಿಂದ ಆರಂಭವಾದ ಆನೆಗಳ ಜಂಬೂಸವಾರಿ ತಾಲೀಮು ಅಶೋಕ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಿಂದ ಅಮಾನಿಕೆರೆ ಮಾರ್ಗವಾಗಿ ಹನುಮಂತಪುರ, ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆ ಬಳಸಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಮೂಲಕ ಬಿ.ಎಚ್​.ರಸ್ತೆ ಮಾರ್ಗವಾಗಿ ಹೆಜ್ಜೆ ಹಾಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಿತು.

ಪ್ರತಿನಿತ್ಯ ತುಮಕೂರು ನಗರದ ಬೀದಿಗಳಲ್ಲಿ ಓಡಾಡಿ ಜನರೊಂದಿಗೆ ಬೆರೆತ ಅನುಭವ ಹೊಂದಿರುವ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ 6300 ಕೆಜಿ ತೂಕವಿದ್ದು ಅಂಬಾರಿ ಹೊರಲಿದೆ. ಕಾಡುಸಿದ್ದೇಶ್ವರ ಮಠದ ಲಕ್ಷ್ಮೀ 3400 ಕೆಜಿ ತೂಕವಿದ್ದು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದೆ. ಎರಡು ಆನೆಗಳ ಆರೋಗ್ಯವಾಗಿವೆ. ಯಾವುದೇ ರೀತಿಯ ತೊಂದರೆಯಿಲ್ಲ. ಈ ಆನೆಗಳು ಮೊದಲಿನಿಂದಲೂ ಮಠಗಳಲ್ಲಿ ಹಾಗೂ ಜನರೊಂದಿಗೆ ಬೆರೆತಿರುವುದರಿಂದ ತಾಲೀಮು ಸಲೀಸಾಗಿ ನಡೆದಿದೆ ಎಂದು ಪಶು ವೈದ್ಯ ಡಾ.ಶ್ರೀಧರ್​ ತಿಳಿಸಿದರು.

ಕಣ್ಮನ ಸೆಳೆಯಲಿದೆ ಅದ್ದೂರಿ ಜಂಬೂಸವಾರಿ:
ಅಕ್ಟೋಬರ್​ 12ರಂದು ಜಿಲ್ಲೆಯ ಭವ್ಯ ಸಂಸತಿ ಅನಾವರಣಗೊಳಿಸುವ ರೀತಿಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತಿದ್ದು, ಇತ್ತೀಚೆಗಷ್ಟೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ಆನೆಗಳ ಮೆರವಣಿಗೆ ತಾಲೀಮು ನಡೆಸಲಾಯಿತು.


ಜಂಬೂಸವಾರಿ ಮೆರವಣಿಗೆಯಲ್ಲಿ ಕ್ರಮವಾಗಿ ಪೊಲೀಸ್​ ಇಲಾಖೆಯ ಅಶ್ವದಳ 10ಮೀ. ಜಾನಪದ ಕಲಾ ತಂಡಗಳು 20ಮೀ. ಗತವೈಭವ ಸಾರುವ ಆಕರ್ಷಕ 30 ವಿಂಟೇಜ್​ ಕಾರುಗಳು 200 ಮೀ. ಪೊಲೀಸ್​ ಹಾಗೂ ಎನ್​.ಸಿ ಬ್ಯಾಂಡ್​ 20 ಮೀ. 20 ಜತೆ ಎತ್ತುಗಳ ರಾಸು 20 ಮೀ. ಅಲಂಕೃತಗೊಂಡ ಟ್ಯಾಕ್ಟರ್​ನಲ್ಲಿ ಜಿಲ್ಲೆಯ 70 ದೇವರುಗಳು 700 ಮೀ. ನಂತರ ಕಲಾ ತಂಡಗಳ ಸಾಲು 100 ಮೀ. ಹೀಗೆ ಒಟ್ಟು ಜಂಬೂಸವಾರಿ ಮೆರವಣಿಗೆಯ ಉದ್ದ ಸುಮಾರು 1290 ಮೀಟರ್​ ಇರಲಿದೆ. ಅಲ್ಲದೆ, ಬಹುಮುಖ್ಯವಾಗಿ ಅಲಂಕಾರಗೊಂಡ ಆನೆಯ ಮೇಲೆ ನಾಡ ದೇವತೆ ಶ್ರೀಚಾಮುಂಡೇಶ್ವರಿ ದೇವಿ ವಿರಾಜಮಾನವಾಗಿ ಸಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net