

ತುಮಕೂರು: ತುಮಕೂರು ದಸರಾ ಇನ್ನಷ್ಟು ವಿಜೃಂಭಣಗೊಳ್ಳುತ್ತಿದೆ. ಅ.11 ಹಾಗೂ 12ರಂದು ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಮರೋಪಾದಿ ಸಿದ್ಧತೆ ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಂದೆ ಶಿಕ್ಷಣ ಭೀಷ್ಮಡಾ.ಎಚ್.ಎಂ.ಗಂಗಾಧರಯ್ಯ ಮಹಾದ್ವಾರ ನಿರ್ಮಿಸಲಾಗಿದೆ.
ಎರಡು ದಿನಗಳ ಸಾಂಸತಿಕ ಕಾರ್ಯಕ್ರಮ ಆಯೋಜಿಸಲು ನಿರ್ಮಾಣಗೊಂಡಿರುವ ಬೃಹತ್ ವೇದಿಕೆಗೆ "ಅಮರ ಶಿಲ್ಪಿ ಜಕಣಾಚಾರಿ' ಹೆಸರಿಡಲಾಗಿದೆ. ಖ್ಯಾತ ವಿಜ್ಞಾನಿ ರಾಜರಾಮಣ್ಣ ಹೆಸರಿನಲ್ಲಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಎಚ್ಎಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕದವರು ನಿರ್ಮಿಸಿರುವ ಹೆಲಿಕಾಪ್ಟರ್ ಮಾದರಿಯನ್ನು ಪ್ರದರ್ಶನದಲ್ಲಿಡಲಾಗಿದ್ದು ಪರಮೇಶ್ವರ ಬುಧವಾರ ವೀಸಿದರು.
ಕಾರ್ಯಕ್ರಮ ವೀಕ್ಷಿಸಲು ಬರುವ ಕಲಾಸಕ್ತರಿಗೆ ಯಾವುದೇ ರೀತಿ ತೊಂದರೆಗಳುಂಟಾಗದಂತೆ ಆಸನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭುಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ನಿರ್ಮಿತಿ ಕೇಂದ್ರದ ರಾಜಶೇಖರ್ ಮತ್ತಿತರರು ಹಾಜರಿದ್ದರು.
ಪರಂ ದಂಪತಿ ಪೂಜೆ
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಕನ್ನಿಕಾ ಪರಮೇಶ್ವರಿ ದಂಪತಿ ಬುಧವಾರ ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಕಾಳರಾತ್ರಿ(ಶಾರದಾ) ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.