

ತಿಪಟೂರು: ಕೊಬ್ಬರಿ ಮಾರುಕಟ್ಟೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ತಿಪಟೂರು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಇ-ಟೆಂಡರ್ ಬದಲಾವಣೆ ಕುರಿತ ಉಪವಿಭಾಗ ಮಟ್ಟದ ರೈತರೊಂದಿಗಿನ ಸಭೆಯಲ್ಲಿ ನಿರೀಕ್ಷೆ ಯಂತೆಯೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು.
ತಿಪಟೂರು ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೃಷಿ ಮಾರುಕಟ್ಟೆ ಬೆಂಗಳೂರು ವಿಭಾಗದ ಹೆಚ್ಚುವರಿ ನಿರ್ದೇಶಕ ರಾಜಣ್ಣ. ಹಾಸನ ವಿಭಾಗದ ಉಪನಿರ್ದೇಶಕ ಶ್ರೀಹರಿ. ಚಿತ್ರದುರ್ಗದ ಕೃಷ್ಣಪ್ಪ. ಮಂಡ್ಯ ಎಪಿಎಂಸಿ ಸಹಾಯಕ ನಿರ್ದೇಶಕಿ ರೇವತಿಸಿಂಗ್. ತುರುವೇಕರೆ, ಗುಬ್ಬಿ. ಅರಸೀಕೆರೆ, ಚನ್ನರಾಯಪಟ್ಟಣ. ನಾಗಮಂಗಲ. ಹೊಸದುರ್ಗಎಪಿಎಂಸಿ ಕಾರ್ಯದರ್ಶಿಗಳು. ಡಿವೈಎಸ್ಪಿ ವಿನಾಯಕ ಎನ್.ಶಟಗೇರಿ ಹಾಗೂ ತಿಪಟೂರು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ. ಸಹಾಯಕ ಕಾರ್ಯದರ್ಶಿ ಹನುಮಂತರಾಜು ಇದ್ದರು.
ಈ ಹಿಂದಿನ ಸಭೆಯಲ್ಲಿ ನಿರ್ಧಾರವಾಗಿರುವಂತೆಯೇ ಕೊಬ್ಬರಿ ಆನ್-ಲೈನ್ ಟೆಂಡರ್ ನಡೆಯುವ ದಿನ ಬುಧವಾರ ಮತ್ತು ಶನಿವಾರದ ಬದಲಾಗಿ ಪ್ರತಿ ಸೋಮವಾರ ಮತ್ತು ಗುರುವಾರ ನಡೆಸಲು ಹಾಗೂ ಮಧ್ಯಾಹ್ನ 2ರ ಬದಲಿಗೆ ಮಧ್ಯಾಹ್ನ 3ಕ್ಕೆ ಟೆಂಡರ್ ಘೋಷಿಸುವ ಮಹತ್ವದ ತೀರ್ಮಾನಕ್ಕೆ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಉದ್ದೇಶಪೂರ್ವಕವಾಗಿ ಟಂಡರ್ನಲ್ಲಿ ಕೊಬ್ಬರಿಗೆ ಅಸಾಮಾನ್ಯ ಧಾರಣೆ ನಮೂದಿಸುವ ಖರೀದಿದಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೈಸೆನ್ಸ್ ರದ್ದುಪಡಿಸಬೇಕು ಎಂದು ಕೆಲವು ದಲ್ಲಾಲರು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿಯೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾದ್ದರಿಂದ ಶಿಸ್ತುಕ್ರಮ ಎಚ್ಚರಿಕೆ ರರವಾನಿಸಲಾಯಿತು.
ಅಕ್ಟೋಬರ್ 2ರಿಂದಲೇ ಎಲ್ಲಾ ದಲ್ಲಾಲರು ಅಂಗಡಿಗಳಲ್ಲಿ ಘೋಷಣೆಯಾಗುವ ಅತೀ ಹೆಚ್ಚಿನ ಟೆಂಡರ್ ಧಾರಣೆಯನ್ನು ರೈತರಿಗೆ ಪಾವತಿಸಬೇಕು, ಅಂಗಡಿಗೆ ಟೆಂಡರ್ ನಮೂದಿಸುವಂತೆ ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಉತ್ತೇಜಿಸಬೇಕು ಎಂದು ಸೂಚಿಸಲಾಯಿತು.
ಕೊಬ್ಬರಿ ತೂಕಕೊಟ್ಟು ಅಂಗಡಿಯಲ್ಲಿ ತಿಂಗಳಾನುಗಟ್ಟಲೇ ಬಿಟ್ಟಿರುತ್ತಿದ್ದ ರೈತರಿಗೆ ಬ್ರೇಕ್ ಹಾಕಲಾಗಿದ್ದು ಮಾರುಕಟ್ಟೆಯಲ್ಲಿ ಗರಿಷ್ಟ ಮೂರು ಟೆಂಡರ್ ನಡೆಯುವಷ್ಟರಲ್ಲಿ ಕೊಬ್ಬರಿ ಮಾರಾಟ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದನ್ನು ಉಲ್ಲಂಗಿಸಿ ಕೊಬ್ಬರಿ ಇಟ್ಟುಕೊಂಡರೆ ಅಂತಹ ದಲ್ಲಾಲರ ಮೇಲೆ ಶಿಸ್ತುಕ್ರಮಕ್ಕೆ ತೀರ್ಮಾನಿಸಲಾಯಿತು. ಒಟ್ಟಾರೆ ಹಿಂದಿನ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳಿಗೆ ರೈತ ಮುಖಂಡರ ಸಭೆಯಲ್ಲಿ ಒಪ್ಪಿಗೆ ಪಡೆಯುವಲ್ಲಿ ಎಪಿಎಂಸಿ ಆಡಳಿತ ಯಶಸ್ವಿಯಾಯಿತು.